Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಪೊಗರು ಮಾತು, ಬ್ಲ್ಯಾಕ್ ಮೇಲ್ ಗೆ ಹೆದರುವವನಲ್ಲ, ಇದು ಕುಮಾರಸ್ವಾಮಿಗೂ ಗೊತ್ತಿದೆ’ : ಡಿಸಿಎಂ

ಬೆಂಗಳೂರು: “ಪೊಗರು ಮಾತುಗಳು, ಬ್ಲ್ಯಾಕ್ ಮೇಲ್ ಗಳಿಗೆ ನಾನು ಹೆದರುವುದಿಲ್ಲ. ಇದು ಅವರಿಗೂ ಗೊತ್ತಿದೆ. ಅವರು ಕೇಳಿರುವ ಎಲ್ಲಾ ಲೆಕ್ಕ ದಾಖಲೆಗಳನ್ನು ಕೊಡಲು ಸಿದ್ಧ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಉತ್ತರಿಸಿ ಮಾತನಾಡಿದ ಅವರು, “ಕಾಂಗ್ರೆಸ್ ನವರು ಮೇಕೆದಾಟು ಪಾದಯಾತ್ರೆ, ಕನಕೋತ್ಸವ ಮಾಡಿದಾಗ ಅನುಮತಿ ಪಡೆದು ಕರೆಂಟ್ ಬಳಸಿದ್ದರೆ, ಲುಲು ಮಾಲ್ ಸೇರಿದಂತೆ ದೊಡ್ಡ ಕಟ್ಟಡ ಕಟ್ಟುವಾಗ ಎಷ್ಟು ಕರೆಂಟ್ ಎಳೆದುಕೊಂಡಿಲ್ಲ, ಅದಕ್ಕೆ ಲೆಕ್ಕ ಕೊಡುವರೇ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಮಾಧ್ಯಮಗಳು ಕೇಳಿದಾಗ ಶಿವಕುಮಾರ್ ಅವರು ಈ ರೀತಿ ಉತ್ತರಿಸಿದರು”.

“ಕುಮಾರಸ್ವಾಮಿ ಹುಚ್ಚರಾಗಿದ್ದಾರೆ. ಅವರು ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ. ಹತಾಶೆಯಲ್ಲಿ ಅವರು ಬಾಯಿಗೆ ಬಂದದ್ದು ಮಾತನಾಡುತ್ತಿದ್ದಾರೆ. ಅವರು ಏನೇನು ಕೇಳುತ್ತಾರೆ, ಅವರ ಆಚಾರ ವಿಚಾರ, ಮಾತುಗಳಿಗೆ ರಾಜ್ಯದ ಜನ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಇನ್ನು ಬೇಕಾದರೆ ಆ ಉತ್ತರವನ್ನು ನಾನು ಕೊಡುತ್ತೇನೆ. ಅವರು ಕೇಳುತ್ತಿರುವ ಲೆಕ್ಕಾಚಾರದ ಪಟ್ಟಿ ಕೊಡೋಣ” ಎಂದು ತಿಳಿಸಿದರು.

ನಿಮ್ಮ ಮಾಲ್ ಅನ್ನು ಖರಾಬು ಭೂಮಿಯಲ್ಲಿ ಕಟ್ಟಿದ್ದೀರಿ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ನಾನು ಮಾಲ್ ಕಟ್ಟಿರುವ ಜಾಗ ಕೇಂದ್ರ ಸರ್ಕಾರದ ಒಂದು ಸಂಸ್ಥೆಗೆ ಸೇರಿದ್ದು. ಆ ಸಂಸ್ಥೆಯವರು ದಾಖಲೆ ಮುಂದಿಟ್ಟು ಟೆಂಡರ್ ಕರೆದಿದ್ದರು. ಅದನ್ನು ನಮ್ಮ ಸ್ನೇಹಿತರು ಖರೀದಿ ಮಾಡಿದ್ದರು. ಅವರಿಂದ ನಾನು ಖರೀದಿ ಮಾಡಿ ಜಂಟಿ ಸಹಯೋಗದಲ್ಲಿ ಮಾಲ್ ಕಟ್ಟಿದ್ದೇವೆ. ಅದರಲ್ಲಿ ಏನಾದರೂ ತಪ್ಪಿದ್ದರೆ ನನ್ನನ್ನು ಗಲ್ಲಿಗೆ ಹಾಕಲಿ. ನನ್ನನ್ನು ಈ ರೀತಿ ನಿಯಂತ್ರಿಸಲು ಅವರು ಈಗಾಗಲೇ ಬೇಕಾದಷ್ಟು ಪ್ರಯತ್ನ ಮಾಡಿದ್ದಾರೆ. ಅವರ ತಂದೆಯವರು ಕೂಡ 10-15 ವರ್ಷಗಳ ಹಿಂದೆಯೇ ಜಯರಾಜ್ ಎಂಬ ಅಧಿಕಾರಿ ಮೂಲಕ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು. ಈಗಲೂ ಯಾವುದೇ ರೀತಿಯ ತನಿಖೆ ಮಾಡಿಸಲಿ. ನಾನು ಎಲ್ಲದಕ್ಕೂ ಸಿದ್ಧ ಎಂದರು.

ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯಾಗಿ ಪ್ರತಿ ಸಂದರ್ಭದಲ್ಲೂ ನನ್ನ ಆಸ್ತಿ ವಿವರ ಘೋಷಿಸಿದ್ದೇನೆ. ನಾನು ಅಕ್ರಮವಾಗಿ ಕರೆಂಟ್ ಬಳಸಿರುವ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ನಾನು ಕಟ್ಟಿರುವ ಮಾಲ್ ಅನ್ನು ನನ್ನ ಪಾರ್ಟ್ನರ್ ಶೋಭಾ ಡೆವಲಪ್ಪರ್ಸ್ ಅವರು ಕಟ್ಟಿದ್ದು, ನೀವು ಎಷ್ಟು ಕರೆಂಟ್ ಬಳಸಿದ್ದೀರಿ ಎಂದು ದಾಖಲೆ ಸಮೇತ ತಂದು ತೋರಿಸಿ ಎಂದು ಅವರಿಗೆ ಹೇಳುತ್ತೇನೆ” ಎಂದು ತಿಳಿಸಿದರು.

ಜಮೀರ್ ಅಹ್ಮದ್ ಅವರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಕೇಳಿದಾಗ, “ನನಗೆ ಈ ವಿಚಾರ ತಿಳಿದಿಲ್ಲ. ತಿಳಿದ ನಂತರ ಮಾತನಾಡುತ್ತೇನೆ” ಎಂದರು.