Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪ್ರಾಜೆಕ್ಟ್‌ಗಾಗಿ ಅಧಿಕಾರಿಗಳಿಗೆ ಲಂಚ.! – ಅದಾನಿ ಉದ್ಯಮ ಸಮೂಹದ ವಿರುದ್ಧ ಅಮೆರಿಕ ತನಿಖೆ

ವಾಷಿಂಗ್ಟನ್: ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್‌ಗೆ ಸಂಕಷ್ಟವೊಂದು ಎದುರಾಗಿದೆ. ಪ್ರಾಜೆಕ್ಟ್‌ಗಾಗಿ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕವು ಅದಾನಿ ಗ್ರೂಪ್‌ ಹಾಗೂ ಗೌತಮ್ ಅದಾನಿ ವಿರುದ್ಧ ತನಿಖೆ ಆರಂಭಿಸಿದೆ ಎಂದು ತಿಳಿದುಬಂದಿದೆ. ಅದಾನಿ ಕಂಪನಿ ಅಥವಾ ಗೌತಮ್ ಅದಾನಿ ಸೇರಿದಂತೆ ಇದಕ್ಕೆ ಸಂಬಂಧ ಹೊಂದಿದ ವ್ಯಕ್ತಿಗಳು ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ ತಮ್ಮ ಪರವಾದ ನಿರ್ಧಾರ ಕೈಗೊಳ್ಳಲು ಭಾರತದ ಅಧಿಕಾರಿಗಳಿಗೆ ಲಂಚ ನೀಡುವುದರಲ್ಲಿ ನಿರತರಾಗಿದ್ದಾರೆಯೇ ಎಂಬ ಬಗ್ಗೆ ಮಾಹಿತಿಗಳನ್ನು ಶೋಧಿಸಲಾಗುತ್ತಿದೆ ಎಂದು ಈ ರಹಸ್ಯ ಪ್ರಯತ್ನದಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಗೌತಮ್ ಅದಾನಿ ಅವರ ವರ್ತನೆ ಹಾಗೂ ಅದಾನಿ ಗ್ರೂಪ್‌ನಿಂದ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಅಟಾರ್ನಿ ಕಚೇರಿ ಹಾಗೂ ವಾಷಿಂಗ್ಟನ್‌ನಲ್ಲಿರುವ ಜಸ್ಟಿಸ್‌ ಡಿಪಾರ್ಟ್‌ಮೆಂಟ್‌ನ ಫ್ರಾಡ್ ಯುನಿಟ್‌ನ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಈಗ ಭಾರತದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದಾಗ್ಯೂ, ಅಮೆರಿಕದ ಅಧಿಕಾರಿಗಳು ತನಿಖೆ ಆರಂಭಿಸಿರುವ ಕುರಿತು ಯಾವುದೇ ಮಾಹಿತಿ ಇಲ್ಲ ಎಂಬುದಾಗಿ ಅದಾನಿ ಗ್ರೂಪ್‌ ತಿಳಿಸಿದೆ. ಅಝೂರ್ ಪವರ್ ಗ್ಲೋಬಲ್ ಎಂಬ ನವೀಕರಿಸಬಹುದಾದ ವಿದ್ಯುತ್ ಉತ್ಪಾದನಾ ಕಂಪನಿ ಬಗ್ಗೆಯೂ ತನಿಖೆ ನಡೆಸಲಾಗುತ್ತಿದ್ದು, ಅಮೆರಿಕದ ನ್ಯೂಯಾರ್ಕ್ ಪೂರ್ವ ಜಿಲ್ಲೆಯ ಅಟಾರ್ನಿ ಕಚೇರಿ ಮತ್ತು ವಾಷಿಂಗ್ಟನ್‌ನ ನ್ಯಾಯಾಂಗ ಇಲಾಖೆಯ ವಂಚನೆ ಘಟನೆ ತನಿಖೆ ನಡೆಸುತ್ತಿವೆ. “ನಮ್ಮ ಸಮೂಹದ ಅಧ್ಯಕ್ಷರ ಮೇಲೆ ತನಿಖೆ ನಡೆಯುತ್ತಿರುವ ಬಗ್ಗೆ ನಮಗೆ ಯಾವುದೇ ಅರಿವು ಇಲ್ಲ” ಎಂದು ಅದಾನಿ ಸಮೂಹ ಇ-ಮೇಲ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. “ಆಡಳಿತದ ಅತ್ಯುನ್ನತ ಮಾನದಂಡಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿರುವ ಈ ಉದ್ಯಮ ಸಮೂಹ, ಭಾರತ ಮತ್ತು ಇತರ ದೇಶಗಳಲ್ಲಿ ಭ್ರಷ್ಟಾಚಾರ ವಿರೋಧಿ ಮತ್ತು ಲಂಚ ವಿರೋಧಿ ಕಾನೂನುಗಳಿಗೆ ಬದ್ಧ” ಎಂದು ಹೇಳಿದೆ.