Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಗರ್ಹುಕುಂ ಸಾಗುವಳಿದಾರ ಸಮಸ್ಯೆ ಆಲಿಸದ ಸರಕಾರಗಳು: ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ

 

ಚಿತ್ರದುರ್ಗ : ಬಗರ್ಹುಕುಂ ಸಾಗುವಳಿದಾರರು ಕಳೆದ ಎಪ್ಪತ್ತು ವರ್ಷಗಳಿಂದಲೂ ಹಕ್ಕುಪತ್ರಕ್ಕಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಪರಿಹಾರ ನೀಡದ ಸರ್ಕಾರಗಳು ನಿಜಕ್ಕೂ ಬಡ ಜನತೆಗೆ ಅಕ್ಷಮ್ಯ ಅಪರಾಧವೆಸಗುತ್ತ ಕಾಲಹರಣ ಮಾಡುತ್ತಿವೆ ಎಂದು ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಹೇಳಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ಬುಧವಾರ ಏರ್ಪಡಿಸಲಾಗಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಗರ್ಹುಕುಂ ಸಾಗುವಳಿದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟು ಜನ ಓಟು ಹಾಕಿದ್ದಾರೆ. ಸುಳ್ಳು ಹೇಳಿಕೊಂಡು ದಿನಗಳನ್ನು ನೂಕುವುದು ಯಾವುದೆ ಸರ್ಕಾರಕ್ಕೆ ಶೋಭೆಯಲ್ಲ. ಐವತ್ತು ಅವರತ್ತು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿರುವ ಬಗರ್ಹುಕುಂ ಸಾಗುವಳಿದಾರರ ತಾಳ್ಮೆ ಕೆಣಕುವುದು ಬೇಡ. ಹೊಟ್ಟೆ ಪಾಡಿಗಾಗಿ ಕನಿಷ್ಠ ಎರಡು ಮೂರು ಎಕರೆಗಳನ್ನು ಸಾಗುವಳಿ ಮಾಡುತ್ತಿರುವ ಬಡವರಿಗೆ ಭೂಮಿ ಹಕ್ಕು ಪತ್ರ ನೀಡುವುದು ತಪ್ಪೇನಲ್ಲ. ಎಲ್ಲದಕ್ಕೂ ಸಕಾಲ ಎನ್ನುವ ಕಾಯಿದೆಯಿದೆ. ಅರ್ಜಿ ಸಲ್ಲಿಸಿ ಇಂತಿಷ್ಟು ದಿನಗಳಲ್ಲಿ ಕೆಲಸ ಮಾಡಿಕೊಡಬೇಕೆಂಬ ನಿಯಮ ಬಗರ್ಹುಕಂ ಸಾಗುವಳಿದಾರರಿಗೆ ಅನ್ವಯಿಸುವುದಿಲ್ಲವೇ. ಇದು ಅಧಿಕಾರಿಗಳ ಹೊಣೆಗೇಡಿತನವೋ ಇಲ್ಲ ರಾಜಕಾರಣಿಗಳ ನಿರ್ಲಕ್ಷೆಯೋ ಎನ್ನುವುದು ಗೊತ್ತಾಗುತ್ತಿಲ್ಲ. ಹಾಗಾಗಿ ನ್ಯಾಯಾಂಗ ಮಧ್ಯ ಪ್ರವೇಶಿಸಿ ಬಗರ್ಹುಕುಂ ಸಾಗವಳಿದಾರರಿಗೆ ಭೂಮಿ ಹಕ್ಕುಪತ್ರ ಕೊಡುವಂತೆ ಸರ್ಕಾರಕ್ಕೆ ಸೂಚಿಸುವುದು ಒಳ್ಳೆಯದು ಎಂದು ಜೆ.ಯಾದವರೆಡ್ಡಿ ಅಭಿಪ್ರಾಯಪಟ್ಟರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಮಾತನಾಡಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಗರ್ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಶಾಸಕರು ಭೂಮಿ ಹಕ್ಕುಪತ್ರಗಳನ್ನು ಕೊಡಬೇಕು. ಯಾವುದೇ ಕಾರಣಕ್ಕೂ ಭೂಮಿ ಉಳುಮೆ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸಬಾರದು. ಒಂದು ವೇಳೆ ಒಕ್ಕಲೆಬ್ಬಿಸುವುದೇ ಆದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಬಗರ್ ಹುಕುಂ ಕಮಿಟಿ ರಚನೆಯಾಗಿದ್ದು, ಅಧಿಕಾರಿಗಳನ್ನೊಳಗೊಂಡಂತೆ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಕುರಿತು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರೈತ ಮುಖಂಡ ಹಿರಿಯೂರಿನ ಹೊರಕೇರಪ್ಪ ಮಾತನಾಡಿ ಇಲ್ಲಿಯವರೆಗೂ ಎಲ್ಲಾ ಸರ್ಕಾರಗಳು ಸುಳ್ಳು ಹೇಳಿಕೊಂಡು ಬಗರ್ಹುಕುಂ ಸಾಗುವಳಿದಾರರನ್ನು ವಂಚಿಸಿಕೊಂಡು ಬರುತ್ತಿವೆ. ಹಿಡುವಳಿದಾರರಿಗೆ ಭೂಮಿ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ. ಕಾರ್ಪೊರೇಟ್ ಕಂಪನಿಗಳಿಗೆ ನೂರಾರು ಎಕರೆ ನೀಡುತ್ತಿರುವ ಸರ್ಕಾರಕ್ಕೆ ಬಗರ್ಹುಕುಂ ಸಾಗುವಳಿದಾರರ ಜೀವನಕ್ಕೆ ಭೂಮಿ ಕೊಡಲು ಇಲ್ಲವೆ ಎಂದು ಪ್ರಶ್ನಿಸಿದರು.?

ಒಂದೆರಡು ತಿಂಗಳುಗಳಲ್ಲಿ ಬಗರ್ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕುಪತ್ರ ಕೊಡದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.