Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬರ ಪರಿಹಾರದ ಬಗ್ಗೆ ಸುಳ್ಳಿನ ಸರಮಾಲೆ ಹೇಳುತ್ತಿದ್ದಾರೆ: ಸಚಿವೆ ನಿರ್ಮಲಾ ಸೀತಾರಾಮನ್‌.!

ಬೆಂಗಳೂರು: ಕರ್ನಾಟಕಕ್ಕೆ ಬರ ಪರಿಹಾರ ಅನುದಾನ ಬಿಡುಗಡೆ ವಿಳಂಬವಾಗಲು ಕೇಂದ್ರ ಸರ್ಕಾರ ಕಾರಣವಲ್ಲ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳುಗಳ ಮೇಲೆಯೇ ರಾಜಕಾರಣ ನಡೆಸುತ್ತಾ ಬಂದಿರುವ ಬಿಜೆಪಿಗೆ ಸತ್ಯ ಹೇಳಿ ಅಭ್ಯಾಸ ಇಲ್ಲ ಎಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಸಿದ್ದರಾಮಯ್ಯ, ಏಪ್ರಿಲ್‌ 2ರಂದು ಕರ್ನಾಟಕಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಒಂದಷ್ಟು ಸುಳ್ಳುಗಳನ್ನು ಹೇಳಿ ಹೋಗಿದ್ದರು. ಈಗ ನಿರ್ಮಲಾ ಅವರು ಬಂದು ಹಳೆಯ ಸುಳ್ಳುಗಳನ್ನು ಪುನರಾವರ್ತಿಸಿದ್ದಾರೆ. ಆದರೆ, ಕರ್ನಾಟಕ ಜನತೆಗೆ ಸತ್ಯ ತಿಳಿದಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯಗಳು ಮನದಟ್ಟಾಗಿದೆ’ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ₹697 ಕೋಟಿ ನೀಡಿದೆ ಎಂದು ನಿರ್ಮಲಾ ಅವರು ಹೇಳಿದ್ದಾರೆ. ಆದರೆ, ಇದನ್ನು ಹೇಳುವಾಗ ನಿಜವಾದ ಸತ್ಯವನ್ನು ಅವರು ಮುಚ್ಚಿಟ್ಟಿದ್ದಾರೆ. ಪ್ರಕೃತಿ ವಿಕೋಪದ ಪರಿಹಾರ ನೀಡಲು ಕೇಂದ್ರ ಸರ್ಕಾರದ ಅಡಿಯಲ್ಲಿ ಎರಡು ನಿಧಿಗಳಿವೆ. ಮೊದಲನೆಯದು ಎಸ್‌ಡಿಆರ್‌ಎಫ್‌ ಹಾಗೂ ಎರಡನೆಯದು ಎನ್‌ಡಿಆರ್‌ಎಫ್‌. ಸಾಮಾನ್ಯ ಸ್ವರೂಪದ ಪ್ರಕೃತಿ ವಿಕೋಪಕ್ಕೆ ಎಸ್‌ಡಿಆರ್‌ಎಫ್‌ನಿಂದ ಪರಿಹಾರ ನೀಡಲಾಗುವುದು. ಈ ನಿಧಿಯಡಿಯಲ್ಲಿ ನೀಡುವ ಪರಿಹಾರದಲ್ಲಿ ಶೇ.75 ರಷ್ಟು ಪಾಲನ್ನು ಕೇಂದ್ರ ನೀಡಿದರೆ ಉಳಿದ ಶೇ.25 ರಷ್ಟು ಪಾಲನ್ನು ರಾಜ್ಯ ಸರ್ಕಾರ ನೀಡುತ್ತದೆ. ಇದರಡಿಯಲ್ಲಿ ನೀಡುವ ಪರಿಹಾರದ ಮೊತ್ತವನ್ನು ಕೇಂದ್ರ ಹಣಕಾಸು ಆಯೋಗ ನಿರ್ಧಾರ ಮಾಡುತ್ತದೆ ಎಂದು ಸಿಎಂ ತಿಳಿಸಿದ್ದಾರೆ