Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಬಾಕ್ಸಿಂಗ್​ ಲೋಕದ ಸ್ಟಾರ್’ ಮೇರಿ ಕೋಮ್ ನಿವೃತ್ತಿ ಘೋಷಣೆ

ನವದೆಹಲಿ: ಆರು ಬಾರಿ ವಿಶ್ವ ಚಾಂಪಿಯನ್ ಮತ್ತು 2012 ರ ಒಲಿಂಪಿಕ್ ಪದಕ ವಿಜೇತ ಎಂ.ಸಿ ಮೇರಿ ಕೋಮ್(41) ಅವರು ಬಾಕ್ಸಿಂಗ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ (IBA) ನಿಯಮಗಳ ಪ್ರಕಾರ ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳು 40 ವರ್ಷದವರೆಗೆ ಮಾತ್ರ ಗಣ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತವೆ.

“ನನಗೆ ಇನ್ನೂ ಹಸಿವು ಇದೆ ಆದರೆ ದುರದೃಷ್ಟವಶಾತ್ ವಯಸ್ಸಿನ ಮಿತಿ ಮುಗಿದಿರುವುದರಿಂದ ನಾನು ಯಾವುದೇ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನಾನು ಇನ್ನಷ್ಟು ಹೆಚ್ಚು ಆಡಲು ಬಯಸುತ್ತೇನೆ ಆದರೆ ವಯಸ್ಸಿನ ಮಿತಿಯಿಂದಾಗಿ ನಾನು ಬಲವಂತವಾಗಿ ಬಾಕ್ಸಿಂಗ್ ತೊರೆಯುತ್ತಿದ್ದೇನೆ. ಬಾಕ್ಸಿಂಗ್ ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದೆ. ಒಲ್ಲದ ಮನಸ್ಸಿನಿಂದ ನನ್ನ ಬಾಕ್ಸಿಂಗ್​ ಗ್ಲೌಸ್​ ಅನ್ನು ಬಿಚ್ಚಿಡುತ್ತಿದ್ದೇನೆ ” ಎಂದು ಮೇರಿಈ ಸಂದರ್ಭ ಹೇಳಿದ್ದಾರೆ.

ಬಾಕ್ಸಿಂಗ್ ಇತಿಹಾಸದಲ್ಲಿ ಆರು ವಿಶ್ವ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಮೇರಿ ಪಾತ್ರರಾಗಿದ್ದಾರೆ. ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದಾರೆ. 2012ರಲ್ಲಿ ಲಂಡನ್​ನಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಜಯಿಸಿದರು. 18ನೇ ವಯಸ್ಸಿನಲ್ಲಿ ಪೆನ್ಸಿಲ್ವೇನಿಯಾದ ಸ್ಕ್ರಂಟನ್‌ನಲ್ಲಿ ನಡೆದ ಉದ್ಘಾಟನಾ ವಿಶ್ವ ಕೂಟದಲ್ಲಿ ಮೇರಿ ಕೋಮ್​ ಅವರು ಮೊದಲ ಬಾರಿಗೆ ತಮ್ಮನ್ನು ಜಗತ್ತಿಗೆ ಪರಿಚಯಿಸಿಕೊಂಡರು. ಅಂದಿನಿಂದ ಸುದೀರ್ಘ 22 ವರ್ಷಗಳ ಕಾಲ ಬಾಕ್ಸಿಂಗ್​ ಲೋಕದಲ್ಲಿ ಸ್ಟಾರ್​ ಆಗಿ ಮೆರೆದಿದ್ದಾರೆ.