Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಾಕ್ಸ್‌ ಆಫೀಸ್‌ನಲ್ಲಿ ‘ಮಂಜುಮ್ಮೇಲ್ ಬಾಯ್ಸ್’ ಆರ್ಭಟ – 200 ಕೋಟಿ ಕ್ಲಬ್ ಸೇರಿದ ಮೊದಲ ಮಲಯಾಳಂ ಚಿತ್ರ

‘ಮಂಜುಮ್ಮೇಲ್ ಬಾಯ್ಸ್’ ಮಲಯಾಳಂ ಸಿನಿಮಾ ಸೂಪರ್‌ ಹಿಟ್ ಆಗಿದ್ದು, ಇಲ್ಲಿಯವರೆಗೆ ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಕಳೆದ ತಿಂಗಳು ಫೆಬ್ರವರಿ 22ರಂದು ರಿಲೀಸ್ ಆದ ಮಲಯಾಳಂನ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಮಲಯಾಳಂ ಚಿತ್ರರಂಗದಲ್ಲಿ 200 ಕೋಟಿ ರೂಪಾಯಿ ಕ್ಲಬ್ ಸೇರಿದ ಮೊದಲ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ ಅನ್ನೋದು ವಿಶೇಷ. ನೈಜ ಘಟನೆ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಜನರಿಗೆ ಇಷ್ಟ ಆಗಿದೆ. ಈ ಚಿತ್ರವನ್ನು ಸಾಕಷ್ಟು ನೈಜವಾಗಿ ಕಟ್ಟಿಕೊಡುವ ಕೆಲಸವನ್ನು ನಿರ್ದೇಶಕ ಚಿದಂಬರಮ್ ಮಾಡಿದ್ದಾರೆ. ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಮಲಯಾಳಂ ಮಾತ್ರವಲ್ಲದೆ ತಮಿಳಿನಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರ ವಿಶವಾದ್ಯಂತ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತಮಿಳುನಾಡಿನಿಂದಲೇ ಈ ಚಿತ್ರಕ್ಕೆ 50 ಕೋಟಿ ರೂಪಾಯಿ ಹರಿದು ಬಂದಿದೆ. ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಶಿ, ಗಣಪತಿ ಪೊಡುವಲ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಸೌಬಿನ್ ಶಾಹಿರ್ ನಿರ್ಮಾಣ ಮಾಡಿದ್ದಾರೆ.