Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಾಲ್ಯವಿವಾಹ ಪದ್ಧತಿ ಬೇರು ಸಮೇತ ಕಿತ್ತು ಹಾಕಲು ಇಲಾಖೆ ಸನ್ನದ್ಧವಾಗಿದೆ: ಸಚಿವೆ ಹೆಬ್ಬಾಳ್ಕರ್

ಬೆಳಗಾವಿ: ಬಾಲ್ಯವಿವಾಹ ಪದ್ಧತಿಯನ್ನು ಬೇರು ಸಮೇತ ಕಿತ್ತು ಹಾಕಲು ನಮ್ಮ ಇಲಾಖೆ ಸನ್ನದ್ಧವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನಸಭೆಗೆ ತಿಳಿಸಿದ್ದಾರೆ.

ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಕೇಳಿದ ಪ್ರಶ್ನೆಗೆ ಬುಧವಾರ ಸಚಿವರು ಉತ್ತರಿಸುತ್ತಿದ್ದರು. ಬಾಲ್ಯವಿವಾಹ ಪ್ರಕರಣವನ್ನು ಮುಚ್ಚಿಹಾಕಲು ಯಾರಿಂದಲೂ ಸಾಧ್ಯವಿಲ್ಲ. ಈಗ ಕಾನೂನು ಹಿಂದಿನಂತಿಲ್ಲ. ಅತ್ಯಂತ ಪ್ರಬಲವಾದ ಕಾನೂನು ರಾಜ್ಯದಲ್ಲಿ ಜಾರಿ ಇದೆ. ಯಾವುದಾದರೂ ನಿರ್ಧಿಷ್ಟ ಪ್ರಕರಣದಲ್ಲಿ ಲೋಪ ಕಂಡುಬಂದಲ್ಲಿ ಗಮನಕ್ಕೆ ತಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ವಿವಿಧ ನಿಯಮಗಳ ಅಡಿಯಲ್ಲಿ ಕೆಲಸಮಾಡಲಾಗುತ್ತಿದೆ. ಅನುಷ್ಠಾನದಲ್ಲಿರುವ ಕೆಲ ಕುಂದುಕೊರತೆಗಳನ್ನು ಸರ್ಕಾರ ಗಮನಿಸಿದೆ. ಅವುಗಳನ್ನು ಪರಿಹರಿಸಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಶಿಕ್ಷಣ ಇಲಾಖೆ, ಪೊಲಿಸ್ ಇಲಾಖೆ, ಕಾರ್ಮಿಕ ಇಲಾಖೆ, ಮತ್ತಿತರ ಸಂಬಂಧಿಸಿದ ಇಲಾಖೆಗಳಲ್ಲದೇ ರಾಜ್ಯ ಅಪರಾಧ ಜಾಗೃತಿ ದಳ ಹಾಗೂ ಬಾಲ್ಯ ವಿವಾಹ ನಿಷೇಧ ಕೋಶ ಇತ್ಯಾದಿ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಇವುಗಳ ಮೇಲುಸ್ತುವಾರಿ ಹಾಗೂ ದಾಖಲಾಗುವ ನಿರ್ಧಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವರು ಪೂರಕ ಪ್ರಶ್ನೆಗೆ ವಿವರಣೆ ನೀಡಿದರು.