Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಿಜೆಪಿಯನ್ನು ಅಧಿಕಾರದಿಂದ ಇಳಿಸುವುದೇ ‘ಇಂಡಿಯಾ’ದ ಗುರಿ: ಸ್ಟಾಲಿನ್‌

ಚೆನ್ನೈ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಕೆಳಗಿಳಿಸಲು ‘ಇಂಡಿಯಾ’ ಸಿದ್ಧವಾಗುತ್ತಿದೆ. ಈ ಪರಿಕಲ್ಪನೆ ಬಿಜೆಪಿಯನ್ನು ಚಿಂತಾಕ್ರಾಂತವನ್ನಾಗಿಸಲಿದೆ ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌ ಹೇಳಿದ್ದಾರೆ.

ಲೋಕಸಭೆ ಗೆಲ್ಲಲು ಈಗಾಗಲೇ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸಿದ್ಧಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂದು ಹೆಸರಿಡಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 28 ವಿರೋಧ ಪಕ್ಷಗಳು ಒಗ್ಗೂಡುವ ಮೂಲಕ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಮುಂದಾಗಿವೆ. ಜಿ 20 ಶೃಂಗಸಭೆಯ ಆಹ್ವಾನ ಪತ್ರಿಕೆಯಲ್ಲಿ ‘President of India’ ಎಂದು ಸಂಭೋದಿಸುವ ಬದಲು ‘President of Bharat’ ಎಂದು ಕೇಂದ್ರ ಸರ್ಕಾರ ಸಂಭೋದಿಸಿದೆ. ಇದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಸಿಎಂ ಎಂಕೆ ಸ್ಟಾಲಿನ್‌, ಬಿಜೆಪಿ ‘ಇಂಡಿಯಾ’ಗೋಸ್ಕರ ಭಾರತದ ಹೆಸರನ್ನು ಬದಲಾಯಿಸಲು ಹೊರಟಿದೆ. ವಿರೋಧ ಪಕ್ಷಗಳ ಮೈತ್ರಿಕೂಟದ ಹೆಸರು ‘ಇಂಡಿಯಾ’ ಎಂಬ ಕಾರಣದಿಂದ ಬಿಜೆಪಿ ಕೆರಳಿದೆ ಎಂದು ಅವರು ಆರೋಪಿಸಿದ್ದಾರೆ. ‘ಫ್ಯಾಸಿಸ್ಟ್ ಬಿಜೆಪಿ ಆಡಳಿತವನ್ನು ಕಿತ್ತೊಗೆಯಲು ಬಿಜೆಪಿಯೇತರ ಶಕ್ತಿಗಳು ಒಂದಾಗಿವೆ. ವಿರೋಧ ಪಕ್ಷಗಳ ಮೈತ್ರಿಗೆ ಸೂಕ್ತವಾಗಿ INDIA ಎಂದು ಹೆಸರಿಸಿವೆ. ಈಗ ಬಿಜೆಪಿ ‘ಇಂಡಿಯಾ’ವನ್ನು ‘ಭಾರತ್’ ಎಂದು ಬದಲಾಯಿಸಲು ಬಯಸಿದೆ. ಭಾರತವನ್ನು ಬದಲಾಯಿಸುವುದಾಗಿ ಈ ಹಿಂದೆ ಬಿಜೆಪಿ ಭರವಸೆ ನೀಡಿತ್ತು. ಆದರೆ, 9 ವರ್ಷಗಳ ನಂತರ ನಮಗೆ ಸಿಕ್ಕಿದ್ದು ಕೇವಲ ಹೆಸರು ಬದಲಾವಣೆ’ ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.