Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಬಿಜೆಪಿಯವರಿಗೆ ಈ ದೇಶದ ಇತಿಹಾಸವೇ ಗೊತ್ತಿಲ್ಲ’: ಡಿಸಿಎಂ ಡಿಕೆಶಿ

ಬೆಂಗಳೂರು: ಬಿಜೆಪಿಯವರಿಗೆ ಈ ದೇಶದ ಇತಿಹಾಸವೇ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಈ ದೇಶದ ಇತಿಹಾಸವನ್ನು ಗೌರವಿಸಿ, ಕಾಪಾಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಅರಮನೆ ಮೈದಾನದಲ್ಲಿ ಗುರುವಾರ ನಡೆದ ಭಾರತ ಸೇವಾದಳದ ಶತಮಾನೋತ್ಸವ ಸಂಭ್ರಮದಲ್ಲಿ ಮಾತನಾಡಿದ ಅವರು, “ಈ ದೇಶದ ಇತಿಹಾಸ ಗೊತ್ತಿಲ್ಲದವರು ಈಗ ಭಾರತ ಎಂದು ಹೆಸರು ಬದಲಾಯಿಸಲು ಹೊರಟಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚಿತವಾಗಿಯೇ, ಪಕ್ಷದ ಸಂಸ್ಥೆಗೆ ʼಭಾರತʼ ಸೇವಾದಳ ಎಂದು ಹೆಸರಿಟ್ಟವರು ನಾವು ಎಂದು ಅಭಿಮಾನ ವ್ಯಕ್ತಪಡಿಸಿದರು.

ಸೇವಾದಳದವರು ಹೋರಾಟದ ಹಾದಿಯಲ್ಲಿ ಹೆಚ್ಚು ತೊಡಗಿಸಿಕೊಂಡು, ಮುನ್ನುಗ್ಗಬೇಕು. ಹೋರಾಟದ ಹಾದಿಯಲ್ಲಿ ಬಂದವರು ಎಂದಿಗೂ ಮಾರಾಟವಾಗುವುದಿಲ್ಲ. ಕಾಂಗ್ರೆಸ್ ಪಕ್ಷದ ಅಡಿಪಾಯವೇ ಸೇವಾದಳ ಎಂದು ಹೇಳಿದರು.

ನಂಬಿಕೆ ಇಲ್ಲದ ಕಡೆ ವಾದ ಮಾಡಲು, ಇಷ್ಟ ಇಲ್ಲದ ಕಡೆ ತಲೆ ತಗ್ಗಿಸಲು, ಬೆಲೆ ಇಲ್ಲದ ಕಡೆ ಪ್ರೀತಿ ಬಯಸಲು ಹೋಗಬೇಡಿ. ಕಾಯಕ ನಿರತರಾಗಿ ಸಂಸ್ಥೆಯ ಏಳಿಗೆಗೆ ದುಡಿಯಿರಿ, ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಸದಾ ಮುಖ್ಯ ಎಂದು ಸಲಹೆ ನೀಡಿದರು.

ಪಕ್ಷವನ್ನು ಅಧಿಕಾರಕ್ಕೆ ತರಲು ತಳಮಟ್ಟದಿಂದ ಸೇವಾದಳದ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಈ ಸಮಾಜಕ್ಕೆ ನಾವುಗಳು ಕೊಟ್ಟು ಹೋಗಬೇಕು ಅಥವಾ ಬಿಟ್ಟು ಹೋಗಬೇಕು, ನಾವು ಭಾವನೆಯ ಜೊತೆ ಆಟವಾಡಿ ಅಧಿಕಾರಕ್ಕೆ ಬಂದಿಲ್ಲ, ಜನರ ಬದುಕಿನಲ್ಲಿ ಬದಲಾವಣೆ ತರುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದೇವೆ, ಈ ನಿಟ್ಟಿನಲ್ಲಿ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡಿ, ಸಮಾಜಕ್ಕೆ ಏನಾದರೂ ಕೊಡುಗೆ ಕೊಟ್ಟು ಹೋಗೋಣ ಎಂದರು.

ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಪ್ರಧಾನಿಗಳು, ಅಧ್ಯಕ್ಷರು ಸೇರಿದಂತೆ ಅನೇಕ ಪ್ರಮುಖ ನಾಯಕರು ಸೇವಾದಳದ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರವಹಿಕೊಂಡ ಸಂದರ್ಭದಲ್ಲಿ, ನಾನು ಸೇವಾದಳದ ಅಂದಿನ ಅಧ್ಯಕ್ಷರಾಗಿದ್ದ ಪ್ಯಾರೇಜಾನ್ ಅವರಿಂದ ಮೊದಲ ಜ್ಯೋತಿಯನ್ನು ಬೆಳಗಿಸಿದ್ದೇ ಎಂದು ಹೇಳಿದರು.

ಸೇವಾದಳದವರನ್ನು ಕೇವಲ ಸೇವೆಗೆ ಮಾತ್ರ ಬಳಸಿಕೊಳ್ಳುತ್ತಿದ್ದೇವೆ ಎನ್ನುವ ಭಾವನೆ ನಿಮ್ಮಲ್ಲಿ ಮೂಡಬಾರದು. ಸೇವಾದಳದಲ್ಲಿ ಗುರುತಿಸಿಕೊಂಡಿದ್ದೇವೆ ಎನ್ನುವುದೇ ಸ್ವಾಭಿಮಾನ, ಗೌರವದ ಪ್ರಶ್ನೆ ಎಂದು ತಿಳಿಸಿದರು.

ಸೇವೆಯ ಮುಖಾಂತರ ನಾಯಕರಾಗಲು ಹೊರಟಿದ್ದೀರಿ. ಆದ ಕಾರಣ ಸೇವಾದಳದ ಸದಸ್ಯರಿಗೆ ಸಲ್ಲಬೇಕಾದ ಸೂಕ್ತ ಗೌರವವನ್ನು ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್, ಜಿಲ್ಲಾ, ತಾಲ್ಲೂಕು ಮಟ್ಟದ ಅಧ್ಯಕ್ಷರು, ಶಾಸಕರು ಮತ್ತು ಸಚಿವರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಸೇವಾದಳದ ಅಧ್ಯಕ್ಷರಾಗಿ ರಾಮಚಂದ್ರ ಅವರು ಅಧಿಕಾರವಹಿಸಿಕೊಂಡ ನಂತರ ಸಂಘಟನೆಯಲ್ಲಿ ಸಾಕಷ್ಟು ಬದಲಾವಣೆ ತಂದು, ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. ತಳಮಟ್ಟದ ಕಾರ್ಯಕರ್ತರನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸರ್ಕಾರದ ಕಾರ್ಯವೈಖರಿ ಹೇಗೆ ನಡೆಯಬೇಕು, ಯೋಜನೆಗಳನ್ನು ಜನರಿಗೆ ತಲುಪಿಸಲು ಪರಿಣಾಮಕಾರಿಯಾಗಿ ಹೇಗೆ ಕೆಲಸ ಮಾಡಬೇಕು ಎನ್ನುವ ವಿಚಾರಗಳನ್ನು ಮುಕ್ತವಾಗಿ ನನ್ನ ಬಳಿ ಬಂದು ಸಲಹೆ ನೀಡಬಹುದು ಎಂದು ತಿಳಿಸಿದರು.

ಇತಿಹಾಸವನ್ನು ಮರೆತವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. ಈ ಮಾತಿನಂತೆ ನಮ್ಮ ಸೇವಾದಳದ 100 ವರ್ಷಗಳ ಸಾಧನೆಯನ್ನು ಮೆಲುಕು ಹಾಕಲು ಸೇರಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು