Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬುದ್ಧ, ಬಸವ ಚಿಂತನೆ ಉಳಿಗೆ ಕಾಂಗ್ರೆಸ್ ಗೆಲುವು ಅಗತ್ಯ: ಸಚಿವ ಕೆ.ಎಚ್.ಮುನಿಯಪ್ಪ ಅಭಿಪ್ರಾಯ

 

ಚಿತ್ರದುರ್ಗ : ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ಚಿಂತನೆಯುಳ್ಳ ಕಾಂಗ್ರೆಸ್ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಯುತ್ತದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.

ನಗರದ ಎನ್.ಬಿ.ಟಿ.ಹಾಲ್‍ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಗೋವಿಂದ ಕಾರಜೋಳ ಅವರು ತಪ್ಪುಹೆಜ್ಜೆ ಇಟ್ಟಿದ್ದಾರೆ. ಧರ್ಮ ಅಧರ್ಮದ ನಡುವೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಧರ್ಮದ ಪರವಾಗಿರುವ ಸರಳ ಸಜ್ಜನ ಬಿ.ಎನ್.ಚಂದ್ರಪ್ಪ ಅವರ ಗೆಲುವು ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಾಗಿದೆ ಎಂದರು.

ರಾಜ್ಯದಲ್ಲಿ ಕೋಲಾರ ಮತ್ತು ಚಿತ್ರದುರ್ಗ ಎರಡು ಕಡೆ ಮಾದಿಗ ಸಮುದಾಯಕ್ಕೆ ಟಿಕೆಟ್ ತರಬೇಕಾದರೆ ಸಾಕಷ್ಟು ಹೋರಾಟ ನಡೆಸಬೇಕಾಯಿತು. ಸೀಟು ತಪ್ಪಿಸುವ ಹುನ್ನಾರವು ನಡೆಯಿತು. ಎಲ್ಲವನ್ನು ಮೀರಿ ದೊಡ್ಡ ಸಂಖ್ಯೆಯ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಬಾರದೆಂದು ಎ.ಐ.ಸಿ.ಸಿ. ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಸಮುದಾಯಕ್ಕೆ ಟಿಕೇಟ್ ನೀಡಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಈ ಅವಕಾಶ ಬಳಸಿಕೊಳ್ಳಬೇಕು. ಎರಡು ಲಕ್ಷ ಮತಗಳ ಅಂತರದಲ್ಲಿ ಚಂದ್ರಪ್ಪ ಗೆಲ್ಲಬೇಕು ಎಂದು ಹೇಳಿದರು.

ಚಿತ್ರದುರ್ಗ ಹಾಗೂ ಕೋಲಾರ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ ಶೋಷಿತರು, ಅಲ್ಪಸಂಖ್ಯಾತರು, ದಲಿತರು ಶಾಂತವಾಗಿರಬಹುದು. ಕೋಮು ಗಲಭೆಗಳು ನಡೆಯುವುದಿಲ್ಲ. ಕೇವಲ ಮಾದಿಗರಷ್ಟೆ ಅಲ್ಲ ಎಲ್ಲ  ಜಾತಿಯವರನ್ನು ವಿಶ್ವಾಸ ಗಳಿಸಿರುವ ಚಂದ್ರಪ್ಪ ಅವರ ಗೆಲುವು ಸುಲಭವಾಗಿದ್ದು, ದಾಖಲೆ ಮತಗಳ ಅಂತರದ ಗೆಲುವು ಅಗತ್ಯ ಎಂದರು.

 

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಐದು ಉಚಿತ ಗ್ಯಾರೆಂಟಿಗಳನ್ನು ರಾಜ್ಯದ ಜನತೆಗೆ ನೀಡಲಾಗಿದೆ. ಇದು ನುಡಿದಂತೆ ನಡೆಯುವ ಕಾಂಗ್ರೆಸ್ಸಿನ ಬದ್ಧತೆ ಎಂದರು.

ಎಲ್ಲಾ ವರ್ಗದವರನ್ನು ಹಸಿವುಮುಕ್ತವನ್ನಾಗಿಸಿ ಆಹಾರ ಭದ್ರತೆ ಕಾಯಿದೆ ಜಾರಿಗೆ ತಂದಿದ್ದು ನಮ್ಮ ಪಕ್ಷ. ಒಂದು ಕೋಟಿ ಇಪ್ಪತ್ತೆಂಟು ಲಕ್ಷ ಕುಟುಂಬ, ನಾಲ್ಕುವರೆ ಕೋಟಿ ಜನಕ್ಕೆ ಗ್ಯಾರಂಟಿ ಯೋಜನೆಯ ಲಾಭ ಸಿಕ್ಕಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಶಕ್ತಿ ಯೋಜನೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷಕ್ಕೆ ವರದಾನವಾಗಲಿದೆ. ಕಾಂಗ್ರೆಸ್ ಕಾರ್ಯಕ್ರಮಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಬೇಕು ಎಂದು ತಿಳಿಸಿದರು.