Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬೆಂಗಳೂರು ಕೆಫೆ ಸ್ಫೋಟ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನ ಘೋಷಣೆ

ಬೆಂಗಳೂರು :ಕೆಫೆಯಲ್ಲಿ ಸುಧಾರಿತ ಸ್ಫೋಟಕ (ಐಇಡಿ) ಅಳವಡಿಸಿದ ಶಂಕಿತ ಮುಸಾವಿರ್ ಹುಸೇನ್ ಶಾಜಿಬ್ ಮತ್ತು ಪ್ರಕರಣದಲ್ಲಿ ಸಂಚು ರೂಪಿಸಿದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಎಂಬ ಶಂಕಿತ ಆರೋಪಿಗಳ ಮಾಹಿತಿಗಾಗಿ ಎನ್‌ಐಎ ಬಹುಮಾನ ಘೋಷಿಸಿದೆ.

ಬೆಂಗಳೂರು ಕೆಫೆ ಸ್ಫೋಟ ಪ್ರಕರಣದ ಇಬ್ಬರು ಶಂಕಿತರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿದೆ.

ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ (ಐಇಡಿ) ಅಳವಡಿಸಿದ ಶಂಕಿತ ಆರೋಪಿಗಳಾದ ಮುಸಾವಿರ್ ಹುಸೇನ್ ಶಾಜಿಬ್ ಮತ್ತು ಪ್ರಕರಣದಲ್ಲಿ ಸಂಚು ರೂಪಿಸಿದ್ದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಅವರ ಮಾಹಿತಿಗಾಗಿ ಎನ್‌ಐಎ ಬಹುಮಾನ ಘೋಷಿಸಿದೆ. ಇವರಿಬ್ಬರೂ ಈಗಾಗಲೇ 2020ರ ಭಯೋತ್ಪಾದನೆ ಪ್ರಕರಣದಲ್ಲಿ ಬೇಕಾಗಿದ್ದಾರೆ.
ಬಾಂಬ್‌ ಇರಿಸಿದ ವ್ಯಕ್ತಿ ಸ್ಫೋಟ ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಹುಸೇನ್‌ ಶಜೀಬ್ ಮೂರು ಫೋಟೋ ಬಿಡುಗಡೆ ಮಾಡಿದೆ. 30 ವರ್ಷ ವಯಸ್ಸಿನ ಈತ ಜಿಮ್‌ ಬಾಡಿ ಹೊಂದಿದ್ದು ಅಂದಾಜು 6.2 ಅಡಿ ಹೊಂದಿದ್ದಾನೆ. ಮೊಹಮ್ಮದ್‌ ಜುನೈಡ್‌ ಸಯ್ಯದ್‌ ಹೆಸರಿನಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ಹೊಂದಿದ್ದಾನೆ ಎಂದು ತಿಳಿಸಿದೆ.

ಮತ್ತೊಬ್ಬ ಸಂಚುಕೋರ ಅಬ್ದುಲ್‌ ಮತೀನ್‌ ಅಹ್ಮದ್‌ 5.5 ಅಡಿ ಹೊಂದಿದ್ದು ಮುಂದುಗಡೆ ತಲೆ ಬೋಳಾಗಿದ್ದು, ಹೆಚ್ಚಾಗಿ ಕ್ಯಾಪ್‌ ಧರಿಸುತ್ತಾನೆ. 30 ವರ್ಷದ ಈತ ವಿಘ್ನೇಶ್‌ ಅಥವಾ ಬೇರೆ ನಕಲಿ ಐಡಿ ದಾಖಲೆಯನ್ನು ಹೊಂದಿದ್ದಾನೆ ಎಂದು ಹೇಳಿದೆ.

ಎರಡೂ ಶಂಕಿತರ ಬಗ್ಗೆ ಮಾಹಿತಿಯನ್ನು ಹೊಂದಿರುವ ಜನರು [email protected] ಇಮೇಲ್ ಮೂಲಕ ಅಥವಾ ಕರೆ ಮೂಲಕ ಏಜೆನ್ಸಿಯನ್ನು ಸಂಪರ್ಕಿಸಬಹುದು ಎಂದು ಹೇಳಿದೆ. ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಎನ್‌ಐಎ ತಿಳಿಸಿದೆ.

ಎನ್‌ಐಎ ತಂಡವು ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ನಂತರ, ಮಾರ್ಚ್ 28 ರಂದು ಪ್ರಕರಣದ ಸಹ ಸಂಚುಕೋರರಲ್ಲಿ ಒಬ್ಬರಾದ ಮುಝಮ್ಮಿಲ್ ಶರೀಫ್ ಅವರನ್ನು ಬಂಧಿಸಿತ್ತು.ಘಟನೆಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗೆ ಶರೀಫ್ ವ್ಯವಸ್ಥಾಪನಾ ಬೆಂಬಲವನ್ನು ನೀಡಿದ್ದಾನೆ ಎಂದು ಎನ್ಐಎ ಹೇಳಿದೆ.