Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಭಾರತವು 2030 ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ’: ಎಸ್ & ಪಿ ಗ್ಲೋಬಲ್

ನವದೆಹಲಿ:ಭಾರತದ ಆರ್ಥಿಕತೆಯ ಪಾಲಿಗೆ ಶುಭ ಸಮಾಚಾರವಿದ್ದು, 2030 ರ ವೇಳೆಗೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು S&P ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಭವಿಷ್ಯ ನುಡಿದಿದೆ.

ಅಂತಾರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಸಂಸ್ಥೆಯಾಗಿರುವ S&P ಗ್ಲೋಬಲ್ ರೇಟಿಂಗ್ಸ್ ತನ್ನ ಗ್ಲೋಬಲ್ ಕ್ರೆಡಿಟ್ ಔಟ್‌ಲುಕ್ 2024 ರಲ್ಲಿ, 2026-27 ರ ಆರ್ಥಿಕ ವರ್ಷದಲ್ಲಿ ಭಾರತದ GDP ಬೆಳವಣಿಗೆಯು 7% ತಲುಪುತ್ತದೆ ಎಂದು ಅಂದಾಜಿಸಿದೆ.

ಬೆಳವಣಿಗೆ ದರವು ಮುಂದಿನ ಹಣಕಾಸು ವರ್ಷದಲ್ಲಿ (2024-25) 6.4% ನಲ್ಲಿ ಉಳಿಯುವ ನಿರೀಕ್ಷೆಯಿದ್ದು ಬಳಿಕ 6.9% ಗೆ ವೃದ್ದಿಸಿ, ಅಂತಿಮವಾಗಿ 2026-27 ರಲ್ಲಿ 7% ತಲುಪುತ್ತದೆ ಎಂದು ಹೇಳಿದೆ.

2030 ರ ವೇಳೆಗೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು S&P ಅಂದಾಜಿಸಿದ್ದು, ಬಾರತವು ಮುಂದಿನ ಮೂರು ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗುವತ್ತ ಸಾಗುತ್ತಿದೆ ಎಂದು ಹೇಳಿದೆ.

ಪ್ರಸ್ತುತ, ಭಾರತವು ವಿಶ್ವ ಆರ್ಥಿಕತೆಯಲ್ಲಿ ಯುಎಸ್, ಚೀನಾ, ಜರ್ಮನಿ ಮತ್ತು ಜಪಾನ್ ನಂತರ ಐದನೇ ಸ್ಥಾನದಲ್ಲಿದೆ. ರೇಟಿಂಗ್ ಏಜೆನ್ಸಿಯು ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗುವುದರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದು , ಇದು ದೇಶಕ್ಕೆ ಮಹತ್ವದ ಅವಕಾಶವನ್ನು ಒದಗಿಸುತ್ತದೆ.

ಭಾರತವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತನ್ನ GDP ನಿರೀಕ್ಷಿತ ದರಕ್ಕಿಂತ 7.6% ರಷ್ಟು ವೇಗವಾಗಿ ಬೆಳವಣಿಗೆಯನ್ನು ಕಂಡ ಕೆಲವು ದಿನಗಳ ನಂತರ S&P ರೇಟಿಂಗ್ ಸಂಸ್ಥೆ ತನ್ನ ದೃಷ್ಟಿಕೋನವನ್ನು ಹೇಳಿದೆ.