Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಭ್ರಷ್ಟಾಚಾರದಿಂದಾಗಿ ಪೊಲೀಸ್ ಠಾಣೆಗಳು ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟಿವೆ’: ಲೋಕಾಯುಕ್ತ ಕೋರ್ಟ್ ಕಿಡಿ

ಬೆಂಗಳೂರು: “ಭ್ರಷ್ಟಾಚಾರದಿಂದಾಗಿ ಪೊಲೀಸ್ ಠಾಣೆಗಳು ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟಿವೆ” ಎಂದು ಲೋಕಾಯುಕ್ತ ನ್ಯಾಯಾಲಯ ಕಿಡಿಕಾರಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಪಡೆಯುವವರೆಗೆ ಆರೋಪಿತ ದಂಪತಿಯನ್ನು ಬಂಧಿಸದಿರಲು 50,000 ರೂ. ಗಳನ್ನು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟ ಕೆಆರ್​ ಪುರಂ ಪೊಲೀಸ್​ ಇನ್ಸಪೆಕ್ಟರ್​​ ವಜ್ರಮುನಿ ಕೆ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಲೋಕಾಯುಕ್ತ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ.

“ವ್ಯಾಪಾರ ಕೇಂದ್ರಗಳಾಗುತ್ತಿರುವ ಪೊಲೀಸ್ ಠಾಣೆಗಳು ಸವಾಲಾಗಿ ಪರಿಣಮಿಸುತ್ತಿದ್ದು, ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ. ಪೊಲೀಸರು ವಿನಮ್ರ, ಪ್ರಾಮಾಣಿಕ, ಸೇವಾ ಮನೋಭಾವದವರಾಗಿ ಅಮಾಯಕರನ್ನು ರಕ್ಷಿಸಬೇಕು. ಆದರೆ ದುರದೃಷ್ಟವಶಾತ್ ರಕ್ಷಕರೇ ಭಕ್ಷರಾಗುತ್ತಿದ್ದಾರೆ. ಹೀಗಾಗಿ ಪೊಲೀಸ್ ಕೇಂದ್ರದಲ್ಲಿರುವ ಧ್ವನಿಯಿಲ್ಲದ, ಅಸಹಾಯಕ ಮತ್ತು ಬಡ ಪೊಲೀಸ್ ಸಿಬ್ಬಂದಿ ಅಧಿಕಾರಿಗಳಿಗೆ ಬಲಿಪಶುಗಳಾಗುವ ಸಾಧ್ಯತೆಯಿದೆ” ಎಂದು ಲೋಕಾಯುಕ್ತ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆರೋಪಿಗಳಿಗೆ ಜಾಮೀನು ನೀಡಿದರೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಹುದು ಮತ್ತು ತನಿಖೆಗೆ ಅಡ್ಡಿಯಾಗಬಹುದು. ಹೀಗಾಗಿ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವವರೆಗೆ ಮತ್ತು ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಅಂತ ತಿಳಿಯಲು ಇನ್ಸ್‌ಪೆಕ್ಟರ್‌ನ ಕಸ್ಟಡಿ ವಿಚಾರಣೆ ಅಗತ್ಯವಾಗಿದೆ ಎಂದು ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ವಜ್ರಮುನಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಕೆಆರ್ ಪುರಂ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಮ್ಯಾ.ಎನ್ ಅವರು ಗರ್ಭಿಣಿಯಾಗಿರುವುದರ ಜೊತೆಗೆ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.