Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಂಗಳೂರು : ಉಪನೋಂದಣಿ ಕಚೇರಿ ಆಧಾರ್, ಬೆರಳಚ್ಚು ಹ್ಯಾಕ್ ಮಾಡಿ ಬ್ಯಾಂಕ್ ಖಾತೆಗೆ ಕನ್ನ- ಮೂವರು ಅರೆಸ್ಟ್

ಮಂಗಳೂರು : ನಗರದ ಉಪನೋಂದಣಿ ಕಚೇರಿಯಲ್ಲಿ ಆಧಾರ್ ಹಾಗೂ ಬೆರಳಚ್ಚು ನೀಡಿರುವ ಗ್ರಾಹಕರ ಬ್ಯಾಂಕ್‌ ಖಾತೆಗಳಿಂದ ಕನ್ನ ಹಾಕುವ ಸೈಬರ್ ದೋಖಾ ಪ್ರಕರಣದಲ್ಲಿ ಮಂಗಳೂರು ಸೈಬರ್ ಠಾಣೆಯಲ್ಲಿ ಮತ್ತೆ ಎಂಟು ಎಫ್‌ಐಆರ್ ದಾಖಲಾಗಿದೆ‌. ಪೊಲೀಸ್ ಅಧಿಕಾರಿಯೊಬ್ಬರೂ ವಂಚನೆಗೊಳಗಾಗಿರುವ ಈ ಪ್ರಕರಣವನ್ನು ಗಂಭೀರ ಪರಿಗಣಿಸಿರುವ ಮಂಗಳೂರು ಪೊಲೀಸರು ಬಿಹಾರ ಮೂಲದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಯಾವುದೇ ಓಟಿಪಿ ನೀಡದೆ ಪೊಲೀಸ್ ಅಧಿಕಾರಿಯೊಬ್ಬರ ಖಾತೆಯಿಂದ 36,890 ರೂ. ಹಣ ಕಡಿತ ಆಗಿದೆ. ಅವರು ಯಾವುದೇ ಓಟಿಪಿಯನ್ನು ಯಾರಿಗೂ ಕೊಟ್ಟಿರಲಿಲ್ಲ. ಬ್ಯಾಂಕ್ ಕಚೇರಿಯಲ್ಲಿ ವಿಚಾರಿಸಿದಾಗ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಸೋರಿಕೆಯಾಗಿ ಖಾತೆಯಿಂದ ಹಣ ವಂಚನೆಯಾಗಿದೆ ಎಂಬ ಮಾಹಿತಿ ದೊರಕಿದೆ. ಪೊಲೀಸ್ ಅಧಿಕಾರಿ ಮಂಗಳೂರಿನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜಾಗ ಮಾರಾಟದ ಬಗ್ಗೆ ಹೆಬ್ಬೆರಳಿನ ಗುರುತು ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನೀಡಿದ್ದರು. ಆದ್ದರಿಂದ ಅಪರಿಚಿತರು ತಂತ್ರಾಂಶವನ್ನು ಬಳಸಿಕೊಂಡು ತನ್ನ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿದ್ದಾರೆ ಎಂದು ಸೈಬರ್ ಅಪರಾಧ ಠಾಣೆಯಲ್ಲಿ ದೂರು ನೀಡಿದ್ದರು. ಇದೇ ರೀತಿ ಇತರ ಏಳು ಮಂದಿ ಜಾಗ ರಿಜಿಸ್ಟ್ರೇಶನ್ ವಿಚಾರದಲ್ಲಿ ಮಂಗಳೂರಿನ ಉಪ ನೋಂದಣಿ ಕಚೇರಿಗೆ ಆಧಾರ್ ಕಾರ್ಡ್ ಮತ್ತು ಬೆರಳಚ್ಚು ನೀಡಿ ಹಣ ಕಳೆದುಕೊಂಡಿದ್ದಾರೆ. ಸಬ್ ರಿಜಿಸ್ಟ್ರೇಶನ್ ಕಚೇರಿಯಲ್ಲಿ ಕಾವೇರಿ 2 ತಂತ್ರಾಂಶ ಎನ್ನುವ ಹೊಸ ಸಾಫ್ಟ್ ವೇರ್ ಕಳೆದ ವರ್ಷ ಅಳವಡಿಸಲಾಗಿತ್ತು. ಹ್ಯಾಕರ್ ಗಳು ಅದನ್ನು ಹ್ಯಾಕ್ ಮಾಡಿ, ಗ್ರಾಹಕರ ಬೆರಳಚ್ಚು ಮತ್ತು ಆಧಾರ್ ಮಾಹಿತಿಯನ್ನು ಕದಿಯುತ್ತಿದ್ದಾರೆ ಎನ್ನಲಾಗುತ್ತಿದೆ. ಮಂಗಳೂರಿನಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ 25ಕ್ಕೂ ಹೆಚ್ಚು ಮಂದಿ ದೂರು ಕೊಟ್ಟು ಎಫ್‌ಐಆರ್ ಆಗಿದೆ. ಇದೀಗ ಇದರ ಜಾಡು ಹಿಡಿದು ಹೊರಟ ಮಂಗಳೂರಿನ ಸೈಬರ್ ಪೊಲೀಸರು ಮೂವರು ಬಿಹಾರ ಮೂಲದ ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.