Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮರಣದಂಡನೆಗೊಳಗಾಗಿದ್ದ 8 ನೌಕಾಯೋಧರ ಬಿಡುಗಡೆ‌ಗೊಳಿಸಿದ ಕತಾರ್‌! – 7 ಮಂದಿ ಭಾರತಕ್ಕೆ ವಾಪಸ್

ನವದೆಹಲಿ: 2022ರಲ್ಲಿ ಬಂಧಿಸಲಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ನಿವೃತ್ತ ಅಧಿಕಾರಿಗಳನ್ನು ಕತಾರ್ ಬಿಡುಗಡೆ ಮಾಡಿದೆ. ಅವರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಇತ್ತೀಚೆಗೆ ನ್ಯಾಯಾಲಯವು ತೆರವು ಮಾಡಿತ್ತು. ‘ಭಾರತೀಯರನ್ನು ಬಿಡುಗಡೆಗೊಳಿಸಿದ ಕತಾರ್‌ ಸರ್ಕಾರದ ನಿರ್ಧಾರವನ್ನು ಪ್ರಶಂಸಿಸುತ್ತೇವೆ. ಬಿಡುಗಡೆಯಾದ 8 ಮಂದಿಯಲ್ಲಿ 7 ಮಂದಿ ದೇಶಕ್ಕೆ ವಾಪಸ್ ಆಗಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

‘ಭಾರತಕ್ಕೆ ವಾಪಸ್ ಆಗಲು 18 ತಿಂಗಳು ಕಾಯಬೇಕಾಯಿತು. ನಾವು ಪ್ರಧಾನಿಗೆ ಅತ್ಯಂತ ಆಭಾರಿಯಾಗಿದ್ದೇವೆ. ಅವರಿಗೆ ಕತಾರ್ ಜೊತೆ ಉತ್ತಮ ಬಾಂಧವ್ಯವಿದ್ದು, ಅವರು ವೈಯಕ್ತಿಕವಾಗಿ ಮಧ್ಯಪ್ರವೇಶ ಮಾಡದೇ ಇದ್ದಿದ್ದರೆ ನಮ್ಮ ಬಿಡುಗಡೆ ಸಾಧ್ಯವಾಗುತ್ತಿರಲಿಲ್ಲ. ನಮ್ಮ ಬಿಡುಗಡೆಗೆ ಬಹಳವಾಗಿ ಶ್ರಮಿಸಿದ ಭಾರತ ಸರ್ಕಾರಕ್ಕೆ ನಮ್ಮ ಹೃದಯಾಂತರಾಳದಿಂದ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಭಾರತಕ್ಕೆ ಹಿಂದಿರುಗಿದ ನೌಕಾಪಡೆಯ ಮಾಜಿ ಅಧಿಕಾರಿ ಹೇಳಿದ್ದಾರೆ. ಕತಾರ್‌ನ ಖಾಸಗಿ ಕಂಪನಿಯೊಂದರಲ್ಲಿ ಜಲಾಂತರ್ಗಾಮಿ ನೌಕೆಗೆ ಸಂಬಂಧಿಸಿದ ಯೋಜನೆಗಾಗಿ ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಪೂರ್ಣೇಂದು ತಿವಾರಿ, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ, ಕಮಾಂಡರ್ ಅಮಿತ್ ನಾಗ್ಪಾಲ್ ಮತ್ತು ನಾವಿಕ ರಾಗೇಶ್ ಅವರು ಕೆಲಸ ಮಾಡುತ್ತಿದ್ದರು. ಅವರನ್ನು ಬೇಹುಗಾರಿಕೆ ಆರೋಪದಡಿ ಆಗಸ್ಟ್‌ನಲ್ಲಿ ಬಂಧಿಸಿ ಜೈಲಿನಲ್ಲಿಡಲಾಗಿತ್ತು.