Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿಕೊಂಡು ಬಂದ ವೃದ್ಧೆ – ಸರ್ಕಾರದ ವಿರುದ್ದ ಹೆಚ್‍ಡಿಕೆ ಗರಂ

ಬೆಂಗಳೂರು: ದಾವಣಗೆರೆ ಜಿಲ್ಲೆಯ ವೃದ್ಧೆಯೊಬ್ಬರು ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿಕೊಂಡು ಬಂದಿರುವ ವಿಡಿಯೋವೊಂದನ್ನು ಹಂಚಿಕೊಂಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು ಜನರ ಬದುಕು ಹಸನು ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ. ಹಸನು ಮಾಡುವ ಮಾತು ಒಳ್ಳೆಯದೇ, ಆದರೆ ಜನಜೀವನ ಹೇಗೆ ಹಳಿ ತಪ್ಪುತ್ತಿದೆ ಎನ್ನುತ್ತಿರುವುದಕ್ಕೆ ಈ ದೃಶ್ಯವೇ ಜೀವಂತ ಸಾಕ್ಷಿ ಎಂದರು.

ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿಕೊಂಡು ಬಂದಿರುವ ಈ ಅಜ್ಜಿ ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನೇ ಕಲಕಿದ್ದಾರೆ. ಆ ಅಜ್ಜಿ ಅನುಭವಿಸಿರುವ ಯಾತನೆ ನಾವೆಲ್ಲರೂ ತಲೆ ತಗ್ಗಿಸುವಂತೆ ಮಾಡಿದೆ. ಈ ಘಟನೆ ಸರ್ಕಾರದ ಕ್ಷಮತೆಯನ್ನೂ ಪ್ರಶ್ನಿಸಿದೆ ಎಂದಿದ್ದಾರೆ.

ಇನ್ನು ಈ ಅಜ್ಜಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮದವರು. ರಸ್ತೆಯ ಬದಿಯಲ್ಲಿ ತೆವಳಿಕೊಂಡು ಸಾಗಿದ ಅಜ್ಜಿಯ ದುಸ್ಥಿತಿಯನ್ನು ಕಂಡು ನನಗೆ ತೀವ್ರ ದುಃಖವಾಗಿದೆ ಎಂದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ವೃದ್ಧರು, ವಿಕಲಚೇತನರು, ವಿಧವೆಯರು, ದೇವದಾಸಿಯರು ಸೇರಿ ಸಮಾಜದ ವಿವಿಧ ದುರ್ಬಲ ಜನರಿಗೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದೇನೆ. ಅವರ ಆರ್ಥಿಕ ಸಬಲೀಕರಣಕ್ಕೆ ಕ್ರಮ ವಹಿಸಿದ್ದೆ. ವೃದ್ಧಾಪ್ಯ ವೇತನ ಹಾಗೂ ವಿಕಲಚೇತನರ ಮಾಸಾಶನವನ್ನು ಏರಿಕೆ ಮಾಡಿದ್ದೆ. ಕಷ್ಟದಲ್ಲಿರುವವರಿಗೆ ಆಸರೆ ಕೊಡುವುದು ಆಡಳಿತ ನಡೆಸುವವರ ಕರ್ತವ್ಯವಾಗಿದೆ. ಗೃಹಲಕ್ಷ್ಮಿಯರಿಗೆ 2000 ರೂ. ಕೊಡುತ್ತೀರಿ ಸರಿ. ಆದರೆ ಇಂತಹ ಅಸಂಖ್ಯಾತ ವೃದ್ಧ ಅಮ್ಮಂದಿರ ಪರಿಸ್ಥಿತಿ ಏನು? ಸರ್ಕಾರಕ್ಕೆ ಕನಿಕರ ಎನ್ನುವುದು ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.್

ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದೆ, ಸಂತೋಷ. ಆದರೆ ಬಡ, ಅಶಕ್ತ ಮಹಿಳೆಯರಿಗೆ ನೆರವಾಗುವ ವೃದ್ಧಾಪ್ಯ ವೇತನ, ವಿಧವಾ ವೇತನವನ್ನು ಸಕಾಲಕ್ಕೆ ಮತ್ತು ನಿಯಮಿತವಾಗಿ ಬಿಡುಗಡೆ ಮಾಡಬೇಕು. ಮಾಸಾಶನಕ್ಕಾಗಿ ಈ ಅಜ್ಜಿ 5 ಕಿ.ಮೀ. ತೆವಳಿಕೊಂಡು ಬಂದ ದೃಶ್ಯಗಳು ಪುನರಾವರ್ತನೆ ಆಗಬಾರದು. ಕೂಡಲೇ ಆ ತಾಯಿಗೆ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ಇಂತಹದ್ದನ್ನೂ ಕಾಂಗ್ರೆಸ್ ಸರ್ಕಾರ ಕಣ್ತೆರೆದು ನೋಡಲಿ ಎಂದು ಆಗ್ರಹಿಸಿದ್ದಾರೆ.