ಮಿಲಿಟರಿ ಅಕಾಡೆಮಿ ಮೇಲೆ ಡ್ರೋನ್ ದಾಳಿ : 100 ಕ್ಕೂ ಹೆಚ್ಚು ಮಂದಿ ಬಲಿ
ಡೆಮಾಸ್ಕಸ್ : ಸಿರಿಯಾದ ಮಿಲಿಟರಿ ಅಕಾಡೆಮಿ ಮೇಲೆ ಡ್ರೋನ್ ದಾಳಿ ನಡೆದಿದ್ದು 100 ಕ್ಕೂ ಹೆಚ್ಚು ಜನ ಸಾವನ್ನಪ್ಪಿ 240 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಿರಿಯಾದ ಹೋಮ್ಸ್ ಪ್ರಾಂತ್ಯದ ಮಿಲಿಟರಿ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭದ ವೇಳೆ ಈ ದಾಳಿ ನಡೆದಿದೆ. ಮೃತರಲ್ಲಿ 6 ಮಕ್ಕಳು ಸೇರಿದ್ದಾರೆ. ಗಾಯಾಳುಗಳಲ್ಲಿ ಹಲವರ ಪರಿಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಹಸನ್ ಅಲ್-ಗಬಾಶ್ ತಿಳಿಸಿದ್ದಾರೆ. ಸ್ಫೋಟಕಗಳನ್ನು ಹೊತ್ತ ಡ್ರೋನ್ಗಳು ಸಮಾರಂಭವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ಸಿರಿಯಾದ ಮಿಲಿಟರಿ ತಿಳಿಸಿದೆ. ಸಿರಿಯಾದ ರಕ್ಷಣಾ ಸಚಿವರು ಸಮಾರಂಭದಲ್ಲಿ ಭಾಗವಹಿಸಿದ್ದರು. ದಾಳಿಗೂ ಕೆಲವೇ ಸಮಯಗಳ ಮುಂಚೆ ಅವರು ಹೊರಟು ಹೋಗಿದ್ದರು. ಅದಾದ ಬಳಿಕ ಡ್ರೋನ್ ದಾಳಿ ನಡೆದಿದೆ ಎಂದು ಮಾಹಿತಿ ತಿಳಿದುಬಂದಿದೆ.