Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೀಸಲಾತಿ ಭಿಕ್ಷೆಯಲ್ಲ ಹಕ್ಕು, ಪರಿಶಿಷ್ಟರ ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿಗೆ ಕ್ರಮ ಮುಖ್ಯಮಂತ್ರಿ ಸಿದ್ದರಾಮಯ್ಯ

 

ದಾವಣಗೆರೆ:  ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಮೀಸಲಾತಿ ಹೆಚ್ಚಳಕ್ಕೆ ಜನಸಂಖ್ಯೆಗನುಗುಣವಾಗಿ ಶೀಫಾರಸು ಮಾಡಿದ ವರದಿಯನ್ವಯ ಪರಿಶಿಷ್ಟ ಜಾತಿಗೆ ಶೇ 17 ಮತ್ತು ಪ.ಪಂಗಡಕ್ಕೆ ಶೇ 7 ರಷ್ಟು ಮೀಸಲಾತಿ ಕಲ್ಪಿಸಲಾಗಿದ್ದು ಇದರಿಂದ ಲಭ್ಯವಾಗುವ ಬ್ಯಾಕ್‍ಲಾಗ್ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಶುಕ್ರವಾರ ಹರಿಹರ ತಾಲ್ಲೂಕಿನ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಿಂದ ಆಯೋಜಿಸಲಾದ ಶ್ರೀಮಠದ 26 ನೇ ವಾರ್ಷಿಕೋತ್ಸವ ಮತ್ತು ಪುಣ್ಯಾನಂದ ಸ್ವಾಮೀಜಿಯವರ 17 ನೇ ಪುಣ್ಯಸ್ಮರಣೆ, ಪ್ರಸನ್ನಾನಂದ ಸ್ವಾಮೀಜಿಯವರ 16 ನೇ ಪಟ್ಟಾಧಿಕಾರ ಮಹೋತ್ಸವ ಹಾಗೂ ಮಹರ್ಷಿ ವಾಲ್ಮೀಕಿ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮೀಸಲಾತಿ ಜನಸಂಖ್ಯೆಗನುಗುಣವಾಗಿ ಹೆಚ್ಚಳವಾಗಬೇಕು, ಇದರಿಂದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪಾಲುಸಿಗಬೇಕೆಂಬುದರಲ್ಲಿ ಬದ್ದತೆ ಇದೆ. ಮೀಸಲಾತಿ ಜನರ ಹಕ್ಕು, ಇದು ಭಿಕ್ಷೆಯಲ್ಲ, ಬರಿ ಭಾಷಣದಿಂದ ಸಮಾನತೆ ಬರುವುದಿಲ್ಲ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿಗೆ ಕ್ರಮ ಕೈಗೊಳ್ಳುವುದರ ಜೊತೆಗೆ ರಾಜ್ಯದಲ್ಲಿನ ಸೂಕ್ತವಾದ ವಿಶ್ವವಿದ್ಯಾನಿಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಲು ತೀರ್ಮಾನ ಮಾಡಲಾಗುತ್ತದೆ. 2013 ರಲ್ಲಿ ಪರಿಶಿಷ್ಟರ ಕಾನೂನು ಜಾರಿಗೆ ತಂದಿದ್ದರಿಂದ ಅನುದಾನದಲ್ಲಿ ಇವರಿಗಾಗಿ ಶೇ 24.1 ರಷ್ಟು ಅನುದಾನವನ್ನು ಮೀಸಲಿರಿಸಿ ಇವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ದಿಗೆ ವಿನಿಯೋಗಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರವು ಜನಸಂಖ್ಯೆಗನುಗುಣವಾಗಿ ಪರಿಶಿಷ್ಟರ ಕಾಯಿದೆ ಜಾರಿಗೆ ತಂದು ಅನುದಾನ ಮೀಸಲಿರಿಸಿ ಇವರ ಅಭಿವೃದ್ದಿಗೆ ಮುಂದಾಗಬೇಕೆಂದು ಒತ್ತಾಯಿಸುತ್ತೇನೆ ಎಂದರು.

ಚಾಮರಾಜನಗರ, ಹಾಸನ, ಮೈಸೂರು, ಮಡಿಕೇರಿ, ಮಂಡ್ಯ ಜಿಲ್ಲೆಯಲ್ಲಿನ ಪರಿವಾರ ಮತ್ತು ತಳವಾರ ಜನರು ಕೇಂದ್ರ ಸರ್ಕಾರದಲ್ಲಿ ಎಸ್.ಟಿ.ಗೆ ಸೇರಿದ್ದಾರೆ. ಆದರೆ ರಾಜ್ಯದ ಮೀಸಲಾತಿಯಲ್ಲಿ ವರ್ಗ-1 ರಲ್ಲಿ ಇಟ್ಟುಕೊಂಡಿದ್ದರು. ಇದನ್ನು ಗಮನಿಸಿ ರಾಜ್ಯದಲ್ಲಿನ ಎಲ್ಲಾ ಪರಿವಾರ, ತಳವಾರ ಜನರನ್ನು ಎಸ್.ಟಿ.ಗೆ ಸೇರಿಸಲು ಕ್ರಮ ಕೈಗೊಳ್ಳಲಾಗಿದೆ. ಮತ್ತು ಪರಿಶಿಷ್ಟ ಪಂಗಡದವರ ಮೇಲಿದ್ದ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.