Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೊಬೈಲ್‌ ನೋಡಿ ಊಟ ಮಾಡೋ‌ ಅಭ್ಯಾಸ ಎಷ್ಟು ಡೇಂಜರ್ ಗೊತ್ತಾ?

ಪ್ರಸ್ತುತ ಕಾಲದಲ್ಲಿ ಪ್ರತಿಯೊಬ್ಬರು ಮೊಬೈಲ್‌ ವ್ಯಸನಿಗಳೇ. ಯಾಕೆಂದರೆ ಟಾಯ್ಲೆಟ್ ಮಾಡುವಾಗಲೂ ಬೇಕು, ಅನ್ನ ಸೇವನೆ ಮಾಡುವಾಗಲೂ ಕೈಯಲ್ಲಿ ಬೇಕು. ಅಂತಹ ಪರಿಸ್ಥಿತಿಗೆ ಈ ಮೊಬೈಲ್‌ ನಮ್ಮನ್ನು ಆವರಿಸಿದೆ.

ಹಿಂದಿನ ಕಾಲದಲ್ಲಿ ಊಟದ ಸಮಯದಲ್ಲಿ ಮಾತನಾಡಬಾರದೆಂಬ ನಿಯಮದಲ್ಲೇ ಜನರು ಬದುಕನ್ನು ಕಟ್ಟಿಕೊಂಡಿದ್ದರು. ಯಾಕೆಂದರೆ ಆರೋಗ್ಯದ ದೃಷ್ಟಿಯಲ್ಲಿ ಅದನ್ನು ಪಾಲನೆ ಮಾಡುತ್ತಿದ್ದರು. ಆದರೆ ಈಗ ಊಟಕ್ಕೆ ಕೂರುವ ಮುನ್ನಾ ಕೈ ತೊಳೆಯುವ ಬದಲು ಕೈಯಲ್ಲಿ ಮೊಬೈಲ್‌ ಇದೆಯಲ್ಲ ಎಂದು ಯೋಚಿಸುವವರೇ ಹೆಚ್ಚು. ಮೊಬೈಲ್ ನೋಡ್ತಾ ಆಹಾರ ತಿನ್ನೋರಿಗೆ ಏನು ತಿಂದೆ ಅನ್ನೋದೇ ಗೊತ್ತಿರೋದಿಲ್ಲ. ಇದು ನಿಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀಳುತ್ತದೆ.

ಸ್ಪಾರ್ಟ್‌ ಫೋನ್ ಗಳು ನಮ್ಮ ಸುತ್ತ ಮುತ್ತಲಿನ ಆಗು ಹೋಗುಗಳನ್ನು ಅನುಭವಿಸುವುದನ್ನೇ ಕಸಿದು ಕೊಂಡಿದೆ. ಅದೇ ಪರಿಸರವನ್ನು ಮೊಬೈಲ್‌ನಲ್ಲಿ ನೋಡಿ ಖುಷಿ ಪಡುವವರೇ ಹೆಚ್ಚು. ನಮ್ಮವರನ್ನು ಬಿಟ್ಟು ನಾವು ಒಂದು ದಿನವಾದ್ರೂ ಇದ್ದುಬಿಟ್ಟೇವು, ಆದ್ರೆ ಮೊಬೈಲ್ ಫೋನ್ ಇಲ್ಲದೆ ಒಂದು ನಿಮಿಷ ಇರಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸದಾ ನಮ್ಮ ಕೈಯಲ್ಲಿ ಮೊಬೈಲ್ ಇರಬೇಕು. ಎಲ್ಲೋ ಮರೆತ್ರೆ ಜೀವಹೋದಂತೆ ಆಡ್ತೇವೆ. ಅರ್ಧ ಗಂಟೆಗೊಮ್ಮೆ, ಕಾಲು ಗಂಟೆಗೊಮ್ಮೆ ಸಾಮಾಜಿಕ ಜಾಲತಾಣಗಳನ್ನು ಚೆಕ್ ಮಾಡ್ಬೇಕು. ಇದು ನಮಗೆ ತಿಳಿಯದೇ ನಮ್ಮ ಹವ್ಯಾಸವಾಗಿ ಬಿಟ್ಟಿದೆ.

ಇನ್ನೂ ಕೆಲಸದ ಸಂದರ್ಭದಲ್ಲಿ ಮೊಬೈಲ್ ನೋಡಲು ಅವಕಾಶವಿಲ್ಲದಿದ್ದಾಗ ಊಟದ ಸಮಯ ಮೊಬೈಲ್ ಕೈಗೆ ಬರುವುದು ಅಂತೂ ಗ್ಯಾರಂಟಿ. ಅನೇಕರಿಗೆ ಮೊಬೈಲ್ ಕೈನಲ್ಲಿ ಇಲ್ಲವೆಂದ್ರೆ ಊಟ ಸೇರೋದಿಲ್ಲ. ದೊಡ್ಡವರು ಮಾತ್ರವಲ್ಲ ಮಕ್ಕಳಿಗೂ ಮೊಬೈಲ್ ನೋಡ್ತಾ ಊಟ ಮಾಡೋದು ಅಭ್ಯಾಸವಾಗಿದೆ. ಮಕ್ಕಳು ಊಟ ಮಾಡಲ್ಲ ಎನ್ನುವ ಕಾರಣಕ್ಕೆ ಪಾಲಕರು ಮಕ್ಕಳ ಕೈಗೆ ಮೊಬೈಲ್ ನೀಡಿ ಬಾಯಿಗೆ ಆಹಾರ ತುರುಕುತ್ತಾರೆ. ಆದ್ರೆ ಮಕ್ಕಳ ಆರೋಗ್ಯ ಸುಧಾರಿಸಲು ನಾವು ನೀಡುವ ಈ ಆಹಾರವನ್ನು ಮಕ್ಕಳು ಮೊಬೈಲ್ ನೋಡ್ತಾ ಸೇವನೆ ಮಾಡಿದ್ರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುತ್ತಾರೆ ವೈದ್ಯರು.

ಬೊಜ್ಜು :

ಆಹಾರ ಸೇವನೆ ಮಾಡುವಾಗ ನಮ್ಮ ಗಮನವೆಲ್ಲ ಮೊಬೈಲ್ ಮೇಲಿರುತ್ತದೆ. ನಾವೆಷ್ಟು ಆಹಾರ ಸೇವನೆ ಮಾಡಿದ್ದೇವೆ, ನಮ್ಮ ಹೊಟ್ಟೆ ತುಂಬಿದ್ಯಾ ಎನ್ನುವುದನ್ನು ಕೂಡ ನಾವು ಗಮನಿಸಿರೋದಿಲ್ಲ. ಒಂದಾದ್ಮೇಲೆ ಒಂದರಂತೆ ಆಹಾರ ಹೊಟ್ಟೆಗೆ ಹೋಗುವ ಕಾರಣ ಹಸಿವುಗಿಂತ ಹೆಚ್ಚಿನ ಆಹಾರವನ್ನು ನಾವು ತಿಂದಿರುತ್ತೇವೆ. ಅತಿಯಾದ ಸೇವನೆ ಬೊಜ್ಜಿಗೆ ಕಾರಣವಾಗುತ್ತದೆ.

ಜೀರ್ಣಾಂಗ ವ್ಯವಸ್ಥೆ ಮೇಲೆ ಅಡ್ಡಪರಿಣಾಮ:
ಮೊಬೈಲ್ ನೋಡ್ತಾ ನಾವು ಆಹಾರ ಸೇವನೆ ಮಾಡಿದಾಗ ಅದನ್ನು ಜಗಿದು ನುಂಗುವ ಪ್ರಯತ್ನಕ್ಕೆ ಹೋಗುವುದಿಲ್ಲ. ಅದನ್ನು ಹಾಗೆಯೇ ನುಂಗಿರ್ತೇವೆ. ಇದ್ರಿಂದ ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ. ಸೇವನೆ ಮಾಡಿದ ಆಹಾರ ಸರಿಯಾಗಿ ಜೀರ್ಣವಾಗಿಲ್ಲವೆಂದ್ರೆ ಹೊಟ್ಟೆ ನೋವು, ಮಲಬದ್ಧತೆ ನಿಮ್ಮನ್ನು ಕಾಡುತ್ತದೆ. ಆರೋಗ್ಯದ ದೃಷ್ಟಿಯಲ್ಲಿ ಪ್ರತಿ ಅಗಲನ್ನು ಜಗಿದು ತಿನ್ನುವುದು ತುಂಬಾನೇ ಮುಖ್ಯ.

ಮಧುಮೇಹ ಸಮಸ್ಯೆ:

ನಮ್ಮ ಗಮನವನ್ನು ಮೊಬೈಲ್ ಮೇಲಿಟ್ಟು ಆಹಾರ ಸೇವನೆ ಮಾಡಿದ್ರೆ ಮೇಲೆ ಹೇಳಿದಂತೆ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತದೆ. ಅದ್ರ ಜೊತೆ ಬೊಜ್ಜು ಕಾಣಿಸಿಕೊಳ್ಳುತ್ತದೆ. ಇವೆರಡೂ ಮಧುಮೇಹಕ್ಕೆ ದಾರಿಮಾಡಿ ಕೊಡುತ್ತದೆ. ನೀವು ಮಧುಮೇಹದಂತಹ ಖಾಯಿಲೆಯಿಂದ ದೂರ ಇರಬೇಕೆಂದ್ರೆ ಯಾವುದೇ ಕಾರಣಕ್ಕೂ ಮೊಬೈಲ್ ನೋಡ್ತಾ ಆಹಾರ ಸೇವನೆ ಮಾಡುವ ಸಹವಾಸ ಮಾಡ್ಬೇಡಿ.

ನೆಲದ ಮೇಲೆ ಕೂತು ಆಹಾರವನ್ನು ಸೇವನೆ ಮಾಡುವುದು ತುಂಬಾನೇ ಒಳ್ಳೆಯದು. ಶಾಂತವಾಗಿ, ನಮ್ಮ ಗಮನ ಸೇವನೆ ಮಾಡುವ ಆಹಾರದ ಮೇಲೆಯೇ ಇರಬೇಕು.