Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಜ್ಯಾದ್ಯಂತ ನ.30 ರಿಂದ ಡಯಾಲಿಸಿಸ್ ಕೇಂದ್ರಗಳು ಬಂದ್- ಪ್ರತಿಭಟನೆ

ಬೆಂಗಳೂರು: ವೇತನ ಸಮಸ್ಯೆಯನ್ನ ಖಂಡಿಸಿ ಡಯಾಲಿಸಿಸ್ ಸಿಬ್ಬಂದಿ ನ.​ 30 ರಿಂದ ಸಂಪೂರ್ಣ ಕೆಲಸ ಬಂದ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.

ರಾಜ್ಯಾದ್ಯಂತ 202 ಡಯಾಲಿಸಿಸ್​ ಕೇಂದ್ರಗಳಿವೆ. ಬಂದ್​ ಆದರೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಸರ್ಕಾರ ಕೊರೊನಾ ಕಾರಣ ಹೇಳಿ ಕಳೆದ ಎರಡುವರೆ ವರ್ಷಗಳಿಂದ ಸಿಬ್ಬಂದಿ ಅರ್ಧ ಸಂಬಳ ಪಡೆದು ಕೆಲಸ ಮಾಡುತ್ತಿದ್ದಾರೆ.

ಅಲ್ಲದೇ ಕಳೆದ ಎರಡುವರೆ ತಿಂಗಳ ವೇತನ ಕೂಡ ಹೋಲ್ಡ್ ಮಾಡಲಾಗಿದ್ದು, ಅರ್ಧ ಸಂಬಳ ಕೂಡ ಸಿಗದೆ ಸಿಬ್ಬಂದಿ ಪರದಾಡುತ್ತಿದ್ದಾರೆ. ಹೀಗಾಗಿ ಇದನ್ನು ಖಂಡಿಸಿ ಸಿಬ್ಬಂದಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ಈ ಹಿಂದೆ ಡಯಾಲಿಸಿಸ್ ಕೇಂದ್ರ ನಿರ್ವಹಣೆ ಮಾಡುತ್ತಿದ್ದ ಬಿಆರ್​​ಎಸ್ ಸಂಸ್ಥೆ 2021ರಲ್ಲಿ ಸರ್ಕಾರದಿಂದ ಹಣ ಬಿಡುಗಡೆ ಆಗದ ಕಾರಣ ನಿರ್ವಹಣೆಯಿಂದ ಹಿಂದೆ ಸರಿಯಿತು. ಬಳಿಕ ಯಾವುದೇ ಟೆಂಡರ್ ಆಗದೇ ಕೋಲ್ಕತ್ತ ಮೂಲದ ESKAG ಸಂಜೀವಿನಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಯಿತು.

ಈ ಹಿಂದೆ 45 ಕೇಂದ್ರ​​ಗಳ ಜವಬ್ದಾರಿ ಹೊತ್ತಿದ್ದ ESKAG ಸಂಜೀವಿನಿಗೆ ಈಗ 202 ಕೇಂದ್ರ​​ಗಳ ಜವಾಬ್ದಾರಿ ನೀಡಲಾಗಿದೆ. ಈ ಡಯಾಲಿಸಿಸ್​ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 650 ಸಿಬ್ಬಂದಿಗಳ ಸಂಬಳದ ಬಗ್ಗೆ ಸರ್ಕಾರ ಅಸಡ್ಡೆ ತೋರಿದೆ. ವೇತನ ಸಿಗದೇ, ಪಿಎಫ್, ಇಎಸ್ಐ ಇಲ್ಲದೇ 650 ಸಿಬ್ಬಂದಿಗಳು ಪರದಾಡುತ್ತಿದ್ದಾರೆ.

ಇನ್ನು ತಮ್ಮ ಕಷ್ಟಕ್ಕೆ ಸ್ಪಂದಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮೂರು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದರು ಸಚಿವರು ಸ್ಪಂದಿಸಿಲ್ಲ. ರಾಜ್ಯದಲ್ಲಿ ಒಟ್ಟು 202 ಡಯಾಲಿಸಿಸ್ ಕೇಂದ್ರ​​​ಗಳಿವೆ.

ಈ ಪೈಕಿ ಬೆಂಗಳೂರು, ತುಮಕೂರು, ರಾಮನಗರ, ಗದಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ಸೆಂಟರ್​ಗಳಿವೆ. ಇಲ್ಲಿ ಗ್ರೂಪ್ ಡಿ, ಸ್ಟಾಫ್, ಡಯಾಲಿಸಿಸ್ ಟೆಕ್ನಿಶಿಯನ್ಸ್ ಸೇರಿ ಒಟ್ಟು 650 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿದಿನ ಸುಮಾರು 2500 ಹೆಚ್ಚು ಮಂದಿ ಡಯಾಲಿಸಿಸ್​ ಮಾಡಿಸಿಕೊಳ್ಳುತ್ತಾರೆ.