Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರುಚಿಕರವಾದ ಟೊಮೆಟೋ ಬಾತ್ ಮಾಡುವ ವಿಧಾನ

ದಿನಾ ಅನ್ನ ಸಾರು ತಿಂದು ಬೇಜಾರು ಆದಾಗ ಅಥವಾ ಸಾಂಬಾರು ಮಾಡುವುದಕ್ಕೆ ಸಮಯವಿಲ್ಲದೇ ಇದ್ದಾಗ ಫಟಾಫಟ್ ಆಗಿ ಈ ಟೊಮೆಟೋ ಬಾತ್ ಅನ್ನು ತಯಾರು ಮಾಡಬಹುದು. ರುಚಿಕರವಾಗಿರುವುದರ ಜತೆಗೆ ಕಡಿಮೆ ಸಮಯದಲ್ಲಿ ಇದನ್ನು ಮಾಡಿಬಿಡಬಹುದು.

ಬೇಕಾಗುವ ಸಾಮಾಗ್ರಿ:

3 ಟೊಮೆಟೊ ಹಣ್ಣು, 2 ಕಪ್ ಅಕ್ಕಿ, 2 ಚಮಚ ಎಣ್ಣೆ/ತುಪ್ಪ, 3 ಹಸಿಮೆಣಸು, 1 ದೊಡ್ಡ ಈರುಳ್ಳಿ, ಹಸಿಬಟಾಣಿ 3 ಟೇಬಲ್ ಸ್ಪೂನ್, 4 ಗ್ಲಾಸ್ ನೀರು, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ½ ಇಂಚು ಶುಂಠಿ, 5 ಎಸಳು ಬೆಳ್ಳುಳ್ಳಿ, ಕೊತ್ತಂಬರಿ ಪುಡಿ-2 ಚಮಚ, ಖಾರದಪುಡಿ-1ಚಮಚ, ಅರಿಶಿನ-ಸ್ವಲ್ಪ, ಪುದೀನಾ ಎಲೆ-10, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:

ಮೊದಲಿಗೆ ಒಂದು ಸಣ್ಣ ಫೀಸ್ ಚಕ್ಕೆ, 1 ಏಲಕ್ಕಿ, 1 ಲವಂಗ, ಶುಂಠಿ, ಬೆಳ್ಳುಳ್ಳಿ ಇವನ್ನೆಲ್ಲಾ ಒಟ್ಟು ಸೇರಿಸಿ ಶುಂಠಿ, ಬೆಳ್ಳುಳ್ಳಿಯನ್ನು ಜಜ್ಜುವ ಕಲ್ಲಿನಲ್ಲಿ ಜಜ್ಜಿಕೊಳ್ಳಿ. ನಂತರ ಇದಕ್ಕೆ ಹಸಿಮೆಣಸು ಹಾಕಿ ತರಿತರಿಯಾಗಿ ಜಜ್ಜಿಕೊಳ್ಳಿ. ಕುಕ್ಕರ್ ಗೆ ಎಣ್ಣೆ/ತುಪ್ಪ ಹಾಕಿ. ಇದು ಬಿಸಿಯಾದ ಮೇಲೆ 1 ಚಕ್ಕೆ, 1 ಲವಂಗ, 1 ಏಲಕ್ಕಿ, ಪಲಾವ್ ಎಲೆ ಹಾಕಿ. ನಂತರ ಉದ್ದಕ್ಕೆ ಸೀಳಿಕೊಂಡ ಈರುಳ್ಳಿ ಹಾಕಿ ಪ್ರೈ ಮಾಡಿಕೊಳ್ಳಿ. ಇದಕ್ಕೆ ಜಜ್ಜಿಕೊಂಡ ಶುಂಠಿ ಬೆಳ್ಳುಳ್ಳಿಯ ಮಸಾಲ ಹಾಕಿ 1 ನಿಮಿಷ ಪ್ರೈ ಮಾಡಿ. ನಂತರ ಇದಕ್ಕೆ ಟೊಮೆಟೊ ಹಾಗೂ ಹಸಿಬಟಾಣಿಕಾಳು ಹಾಕಿ ಪ್ರೈ ಮಾಡಿ. ಟೊಮೆಟೊ ಮೆತ್ತಗಾದ ನಂತರ ಕೊತ್ತಂಬರಿ ಪುಡಿ, ಖಾರದಪುಡಿ, ಅರಿಶಿನ, ಕೊತ್ತಂಬರಿ, ಪುದೀನಾ ಸೊಪ್ಪು ಹಾಕಿ 2 ನಿಮಿಷಗಳ ಕಾಲ ಹುರಿಯಿರಿ. ನಂತರ ನೀರು ಸೇರಿಸಿ. ನೀರು ಕುದಿಯಲು ಆರಂಭಿಸಿದಾಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಅಕ್ಕಿ ಹಾಕಿ 2 ವಿಷಲ್ ಬರಿಸಿದರೆ ರುಚಿಕಟ್ಟಾದ ಟೊಮೆಟೊ ಬಾತ್ ಸವಿಯಲು ಸಿದ್ಧ.