Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಲೋಕಸಭೆ ಚುನಾವಣೆಗಾಗಿ ಕರ್ನಾಟಕದಲ್ಲಿ ಪ್ರಧಾನಿ ಸಂಚಾರ; ಇಂದು ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ರಣಕಹಳೆ

ಶಿವಮೊಗ್ಗ: ಎರಡು ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಕಲಬುರಗಿಯಲ್ಲಿ ರಣಕಹಳೆ ಮೊಳಗಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇಂದು(ಮಾ.18) ಶಿವಮೊಗ್ಗದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಕರುನಾಡ ಕಣವನ್ನು ರಂಗೇರಿಸಲಿದ್ದಾರೆ.

ಇಂದು ಮಧ್ಯಾಹ್ನ 1.15ಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸುವ ಪ್ರಧಾನಿ ಅವರು 40 ಎಕರೆ ವಿಸ್ತೀರ್ಣವಿರುವ ನಗರದ ಅಲ್ಲಮಪ್ರಭು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗ ವಹಿಸಲಿದ್ದಾರೆ. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಆರಗ ಜ್ಞಾನೇಂದ್ರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಉಡುಪಿ- ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳು ಮೋದಿ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಮಧ್ಯ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಪ್ರಾಬಲ್ಯ ಹೊಂದಿದ್ದು, ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದೆ. ನಾಲ್ಕು ಲೋಕಸಭಾ ಕ್ಷೇತ್ರದ 2 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಪ್ರತೀ ಬಾರಿ ರ್‍ಯಾಲಿ ವೇಳೆ ನೇರವಾಗಿ ವೇದಿಕೆಗೆ ಆಗಮಿಸುತ್ತಿದ್ದ ಮೋದಿ ಅವರನ್ನು ಈ ಬಾರಿ ಬೃಹತ್‌ ಪೆಂಡಾಲ್‌ನ ಮಧ್ಯಭಾಗದಿಂದ ಕರೆತರಲು ಸಿದ್ಧತೆ ಮಾಡಲಾಗಿದೆ. ವೇದಿಕೆಯ ವರೆಗೂ ಕಾರಿನಲ್ಲಿ ಬರುವ ಮೋದಿ ತೆರೆದ ವಾಹನದಲ್ಲಿ ಮಧ್ಯ ಭಾಗದಿಂದ ವೇದಿಕೆಗೆ ಆಗಮಿಸಲಿದ್ದಾರೆ. ಕಾರ್ಯಕರ್ತರು ಹತ್ತಿರದಿಂದ ಮೋದಿ ಅವರನ್ನು ನೋಡಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.