Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಲೋಕಸಭೆ ಚುನಾವಣೆ : ಐದು ರಾಜ್ಯಗಳಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿಗೆ ಸಿದ್ದಗೊಂಡ ಎಎಪಿ

ನವದೆಹಲಿ:ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಡುವಿನ ಮೊದಲ ಔಪಚಾರಿಕ ಸೀಟು ಹಂಚಿಕೆ ಮಾತುಕತೆ ಸೋಮವಾರ ಸಕಾರಾತ್ಮಕವಾಗಿ ಆರಂಭಗೊಂಡಿದೆ. ದೆಹಲಿ ಮತ್ತು ಪಂಜಾಬ್‌ ಸೇರಿದಂತೆ ಐದು ರಾಜ್ಯಗಳಲ್ಲಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಒಟ್ಟಾಗಿ ಹೋರಾಡಲು ನಿರ್ಧರಿಸಿವೆ.

ಸೋಮವಾರ ನಡೆದ ಸಭೆಯಲ್ಲಿ ವಿವಿಧ ರಾಜ್ಯಗಳಲ್ಲಿ ಮೈತ್ರಿಯ ಅನಿಶ್ಚಿತತೆಗಳ ಮೇಲೆ ಹೆಚ್ಚು ಗಮನಹರಿಸಿದ್ದು, ಮುಂದಿನ ಸಭೆಗಳಲ್ಲಿ ಸೀಟು ಹಂಚಿಕೆ ಸೂತ್ರವನ್ನು ನಿರ್ಧರಿಸುವ ಸಾಧ್ಯತೆಯಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಸಭೆಯಲ್ಲಿ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ, ಪಕ್ಷದ ರಾಷ್ಟ್ರೀಯ ಮೈತ್ರಿ ಸಮಿತಿ (ಎನ್‌ಎಸಿ) ಸದಸ್ಯರಾದ ಮುಕುಲ್ ವಾಸ್ನಿಕ್ ಮತ್ತು ಅಶೋಕ್ ಗೆಹ್ಲೋಟ್ ಉಪಸ್ಥಿತರಿದ್ದರು. ಎಎಪಿ ನಿಯೋಗದಲ್ಲಿ ದೆಹಲಿ ಕ್ಯಾಬಿನೆಟ್ ಸಚಿವರಾದ ಅತಿಶಿ ಮರ್ಲೆನಾ, ಸೌರಭ್ ಭಾರದ್ವಾಜ್ ಮತ್ತು ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಇದ್ದರು.
ಮುಕುಲ್ ವಾಸ್ನಿಕ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ , ಸೀಟು ಹಂಚಿಕೆ ಮತ್ತು ಮುಂಬರುವ ಚುನಾವಣೆಯ ಇತರ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಶೀಘ್ರದಲ್ಲೇ ಅಂತಿಮ ಸೂತ್ರವನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.

‘ಇಂಡಿಯಾ ಮೈತ್ರಿಕೂಟದ ಸ್ಥಾನಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಈ ಬಗ್ಗೆ ನಾವು ಸಂಪೂರ್ಣ ಸಕಾರಾತ್ಮಕವಾಗಿದ್ದೇವೆ’ ಎಂದು ಎಎಪಿ ನಾಯಕ ಭಾರದ್ವಾಜ್ ಹೇಳಿದರು.
ಆಪ್ ದೆಹಲಿ ಸಂಚಾಲಕ ಗೋಪಾಲ್ ರೈ ಮಾತನಾಡಿ, ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ಮಾತುಕತೆ ಪ್ರಾರಂಭವಾಗಿದೆ. ನಾವು ದೆಹಲಿ, ಪಂಜಾಬ್, ಹರಿಯಾಣ, ಗೋವಾ ಮತ್ತು ಗುಜರಾತ್‌ನಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ನಮ್ಮ ನಿಲುವಿಗೆ ಬದ್ಧವಾಗಿದ್ದೇವೆ. ಇಲ್ಲಿಯವರೆಗೆ, ಸಕಾರಾತ್ಮಕ ಚರ್ಚೆಗಳು ನಡೆದಿವೆ ಎಂದು ಹೇಳಿದರು.