Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಲೋಕಸಭೆ ಚುನಾವಣೆ ಮುಗಿಯುವವರೆಗೆ ಶಿವರಾಜಕುಮಾರ್ ಚಲನಚಿತ್ರಗಳ ನಿಷೇಧಿಸಲು ಬಿಜೆಪಿ ಮನವಿ..!!

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ನಟ ಶಿವರಾಜಕುಮಾರ್ ಅವರ ಚಲನಚಿತ್ರಗಳು, ಜಾಹೀರಾತುಗಳು ಮತ್ತು ಜಾಹೀರಾತು ಫಲಕಗಳ ಪ್ರದರ್ಶನವನ್ನು ನಿಷೇಧಿಸುವಂತೆ ಬಿಜೆಪಿ ಶುಕ್ರವಾರ ಚುನಾವಣ ಆಯೋಗಕ್ಕೆ ಮನವಿ ಮಾಡಿದೆ.
ಗೀತಾ ಶಿವರಾಜಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಈ ವಾರದ ಆರಂಭದಲ್ಲಿ ಶಿವರಾಜ್ ಕುಮಾರ್ ಅವರು ಪತ್ನಿ ಪರ ಪ್ರಚಾರ ಆರಂಭಿಸಿದ್ದು, ಇತರ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.
ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ಆರ್. ರಘು ಅವರು ಚುನಾವಣ ಆಯೋಗಕ್ಕೆ ಪತ್ರ ಬರೆದಿದ್ದು, ‘ಶಿವರಾಜಕುಮಾರ್ ಅವರು ರಾಜ್ಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಪ್ರಸ್ತುತ ಕಾಂಗ್ರೆಸ್ ಪಕ್ಷದ ಪರ ರಾಜ್ಯಾದ್ಯಂತ ಚುನಾವಣ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಿನಿಮಾ ರಂಗದ ಕೆಲಸ ಸಾರ್ವಜನಿಕ ವ್ಯಕ್ತಿತ್ವದ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲಿದೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವರ ಹಕ್ಕನ್ನು ನಾವು ಗೌರವಿಸುತ್ತೇವೆ ಆದರೆ,ನ್ಯಾಯಯುತ ವೇದಿಕೆಯನ್ನು ಕಾಪಾಡಿಕೊಳ್ಳುವ ಕಾರಣಕ್ಕಾಗಿ ಅನಗತ್ಯ ಲಾಭ ಅಥವಾ ಪ್ರಭಾವವನ್ನು ತಡೆಯುವುದು ಕಡ್ಡಾಯವಾಗಿದೆ” ಎಂದು ಹೇಳಿದ್ದಾರೆ.
ಅವರ ಗಮನಾರ್ಹ ಪ್ರಭಾವ ಮತ್ತು ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಚಿತ್ರಮಂದಿರಗಳು, ಟಿವಿ ಚಾನೆಲ್‌ಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಸ್ಥಳೀಯ ಸಂಸ್ಥೆಗಳು ಯಾವುದೇ ಚಲನಚಿತ್ರಗಳು, ಜಾಹೀರಾತುಗಳು ಅಥವಾ ಜಾಹೀರಾತು ಫಲಕಗಳನ್ನು ಚುನಾವಣೆ ಮುಕ್ತಾಯದವರೆಗೂ ಪ್ರದರ್ಶಿಸದಂತೆ ಆದೇಶವನ್ನು ಹೊರಡಿಸುವ ಮೂಲಕ ತತ್ ಕ್ಷಣ ಕ್ರಮ ಕೈಗೊಳ್ಳುವಂತೆ ಅವರು ಆಯೋಗಕ್ಕೆ ಮನವಿ ಮಾಡಿದರು.
“ನಾವು ಮನವಿಯನ್ನು ಪರಿಶೀಲಿಸುತ್ತಿದ್ದೇವೆ” ಎಂದು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಪಿಟಿಐಗೆ ತಿಳಿಸಿದ್ದಾರೆ.