Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿಮಾನ ಕಾರ್ಯಾಚರಣೆಯಲ್ಲಿ ನಿಯಮ ಉಲ್ಲಂಘನೆ – ಏರ್‌ ಇಂಡಿಯಾಗೆ ₹80 ಲಕ್ಷ ದಂಡ

ನವದೆಹಲಿ : ವಿಮಾನ ಕಾರ್ಯಾಚರಣೆ ಸಮಯದ ಅವಧಿ ಹಾಗೂ ವಿಮಾನ ಸಿಬ್ಬಂದಿಯ ದಣಿವು ನಿರ್ವಹಣೆ ವ್ಯವಸ್ಥೆ ಸಂಬಂಧ ಇರುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯವು‌ ಏರ್‌ ಇಂಡಿಯಾಗೆ ₹80 ಲಕ್ಷ ದಂಡ ವಿಧಿಸಿದೆ. ಜನವರಿಯಲ್ಲಿ ಏರ್‌ಇಂಡಿಯಾದ ಸ್ಪಾಟ್ ಆಡಿಟ್‌ ನಡೆಸಿದ್ದ ಡಿಜಿಸಿಎ, ಸಾಕ್ಷ್ಯಗಳನ್ನು ಹಾಗೂ ವರದಿಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಂಡಿದೆ. 60 ವರ್ಷಕ್ಕೂ ಮೇಲ್ಪಟ್ಟ ಇಬ್ಬರು ಪೈಲಟ್‌ಗಳು ಏಕಕಾಲದಲ್ಲಿ ವಿಮಾನ ಹಾರಿಸಿರುವ ಕೆಲವು ಘಟನೆಗಳು ಸಾಕ್ಷ್ಯಗಳು ಹಾಗೂ ವರದಿಗಳ ವಿಶ್ಲೇಷಣೆಯಲ್ಲಿ ಗೊತ್ತಾಗಿದೆ. ಸಿಬ್ಬಂದಿಗೆ ಅಗತ್ಯ ವಿಶ್ರಾಂತಿ, ದೂರದ ಪ್ರಯಾಣದ ಮುನ್ನ ಹಾಗೂ ಬಳಿಕ ನಿಡಬೇಕಿದ್ದ ವಿಶ್ರಾಂತಿ ಹಾಗೂ ಲೇ ಓವರ್ ಸಮಯದಲ್ಲಿ ನೀಡಬೇಕಿದ್ದ ವಿಶ್ರಾಂತಿ ನೀಡುವಲ್ಲಿ ಕೊರತೆ ಕಂಡು ಬಂದಿದೆ. ಇದು ನಿಯಮಗಳ ಉಲ್ಲಂಘನೆ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ. ಕೆಲಸದ ಅವಧಿ ಮೀರಿ ಕಾರ್ಯನಿರ್ವಹಿಸಿದ ಹಲವು ಘಟನೆಗಳು ಇವೆ. ಇವುಗಳನ್ನು ತರಬೇತಿ ಅವಧಿ ಎಂದು ನಮೂದು ಮಾಡಲಾಗಿದೆ ಎಂದು ಡಿಜಿಸಿಎ ಹೇಳಿದೆ. ಈ ಬಗ್ಗೆ ಕಾರಣ ಕೇಳಿ ಮಾರ್ಚ್ 1ರಂದು ಏರ್‌ ಇಂಡಿಯಾಗೆ ನೋಟಿಸ್‌ ನೀಡಲಾಗಿತ್ತು. ಇದಕ್ಕೆ ಏರ್‌ ಇಂಡಿಯಾ ನೀಡಿದ ಉತ್ತರ ತೃಪ್ತಿಕರವಾಗಿರದಿದ್ದರಿಂದ ₹80 ಲಕ್ಷ ದಂಡ ವಿಧಿಸಲಾಗಿದೆ.