Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿಶ್ವದ ಅತೀ ಉದ್ದದ ದ್ವಿಪಥ ಸುರಂಗವನ್ನು ಪ್ರಧಾನಿ ಮೋದಿ ಲೋಕರ್ಪಾಣೆ

ಇಟಾನಗರ: ಅರುಣಾಚಲ ಪ್ರದೇಶದಲ್ಲಿ ನಿರ್ಮಾಣಗೊಂಡ ವಿಶ್ವದ ಅತೀ ಉದ್ದದ ದ್ವಿಪಥ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಿದ್ದಾರೆ.

ಇಟಾನಗರದಲ್ಲಿ ನಡೆದ ವಿಕಾಸಿತ ಭಾರತ ವಿಕಾಸಿತ ಈಶಾನ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ ಸೆಲಾ ಸುರಂಗವನ್ನು ಉದ್ಘಾಟಿಸಿದರು. ಈ ಸಮಯದಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಚೀನಾ ಗಡಿ ಭಾಗದಲ್ಲಿ ವಿಶೇಷವಾಗಿ ಈಶಾನ್ಯ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗದ ಕಾರಣ ರಾಜ್ಯಗಳು ಹಿಂದುಳಿದಿತ್ತು. ಅಷ್ಟೇ ಅಲ್ಲದೇ ಗಡಿ ಭಾಗಕ್ಕೆ ಕ್ಷೀಪ್ರವಾಗಿ ಸೈನಿಕರನ್ನು ಕಳುಹಿಸುವುದು ಸವಾಲಿನ ಕೆಲಸವಾಗಿತ್ತು.ಅರುಣಾಚಲ ಪ್ರದೇಶದಲ್ಲಿ ಚೀನಾ ಆಗಾಗ ಕ್ಯಾತೆ ತೆಗೆಯುತ್ತಿದ್ದ ಹಿನ್ನೆಲೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿತ್ತು. ಯೋಜನೆಯ ಭಾಗವಾಗಿ ಈ ಸೆಲಾ ಸುರಂಗವನ್ನು ನಿರ್ಮಾಣ ಮಾಡಲಾಗಿದೆ. ಈ ಮೂಲಕ ಚೀನಾಕ್ಕೆ ಭಾರತ ಟಕ್ಕರ್‌ ಕೊಟ್ಟಿದೆ.

ತೇಜ್‌ಪುರದಿಂದ ತವಾಂಗ್‌ಗೆ ಸಂಪರ್ಕ ಕಲ್ಪಿಸುವ ಸೆಲಾ ಸುರಂಗವು 13,000 ಅಡಿ ಎತ್ತರದಲ್ಲಿ 825 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಗಡಿ ರಸ್ತೆಗಳ ಸಂಸ್ಥೆ ನಿರ್ಮಾಣ ಮಾಡಿದ್ದು, ಒಂದು ಸುರಂಗ 1,003 ಮೀಟರ್‌ ಉದ್ದವಿದ್ದರೆ ಎರಡನೇ ಸುರಂಗ 1,595 ಮೀಟರ್‌ ಉದ್ದದ ಟ್ವಿನ್‌ಟ್ಯೂಬ್‌ ಹೊಂದಿದೆ. ಇ
ಈ ಯೋಜನೆಯೂ 8.6 ಕಿಮೀ ಉದ್ದದ ಎರಡು ರಸ್ತೆಗಳನ್ನು ಸಹ ಒಳಗೊಂಡಿದೆ. ಎರಡೂ ಸುರಂಗಗಳ ನಡುವೆ 1,200 ಮೀಟರ್‌ ಉದ್ದದ ಲಿಂಕ್‌ ರೋಡ್‌ ಕೂಡ ಇದೆ. ದಿನಕ್ಕೆ 3,000 ಕಾರುಗಳು ಮತ್ತು 2,000 ಟ್ರಕ್‌ಗಳು ಸಂಚರಿಸಬಹುದು ಎಂದು ಅಂದಾಜಿಸಲಾಗಿದೆ. ಸುರಂಗ ಮಾರ್ಗದಲ್ಲಿ ಗಂಟೆಗೆ 80 ಕಿ.ಮೀ ಗರಿಷ್ಠ ವೇಗದ ಮಿತಿಯನ್ನು ಹೇರಲಾಗಿದೆ.

ಚೀನಾ ಗಡಿಯಲ್ಲಿರುವ ತವಾಂಗ್‌ಗೆ ಎಲ್ಲಾ ಹವಾಮಾನದಲ್ಲೂ ಈ ಸಂಪರ್ಕ ಕಲ್ಪಿಸಬಹುದಾಗಿದೆ. ಇದು ಭಾರತ-ಚೀನಾ ಮಧ್ಯೆ ಇರುವ ಗಡಿ ವಾಸ್ತವ ರೇಖೆ (ಎಲ್‍ಎಸಿ) ಬಳಿಯ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆ ಸೈನಿಕರನ್ನು ಕ್ಷಿಪ್ರವಾಗಿ ಕಳುಹಿಸಲು, ಸೇನೆಯ ಭಾರೀ ಗಾತ್ರದ ವಾಹನಗಳ ಸಂಚಾರ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು ನೆರವಾಗಲಿದೆ.

ತೇಜ್‌ಪುರದಿಂದ ತವಾಂಗ್‌ಗೆ 90 ಕಿ.ಮೀ ದೂರವಿದ್ದು ಈಗ ಈ ಅಂತರ 12 ಕಿ.ಮೀ ಇಳಿಕೆಯಾಗಿದೆ. ಕನಿಷ್ಠ 1 ಗಂಟೆಯ ಪ್ರಯಾಣದ ಸಮಯ ಉಳಿತಾಯವಾಗಲಿದೆ.
ಫೆಬ್ರವರಿ 2019ರಲ್ಲಿ ಪ್ರಧಾನಿ ಮೋದಿ ಅವರು ಯೋಜನೆಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದ್ದರು. ಕೋವಿಡ್ -19 ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸುರಂಗ ನಿರ್ಮಾಣದ ಕೆಲಸ ವಿಳಂಬವಾಗಿತ್ತು.