Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ತಾಕೀತು: ಸೋಮಶೇಖರ್

 

ಚಿತ್ರದುರ್ಗ:  ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆ, ಬೆಳೆಗೆರೆ ಮತ್ತು ಹಿರಿಯೂರು ತಾಲ್ಲೂಕು ಬುರುಜಿನ ರೊಪ್ಪ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಗಳ ಗ್ರಾಮಗಳು, ಗ್ರಾ.ಪಂ. ಕಚೇರಿಗಳು, ಶಾಲೆಗಳಿಗೆ ಶನಿವಾರದಂದು ದಿಢೀರ್ ಭೇಟಿ ನೀಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಮೇಲ್ಮಟ್ಟದ ಹಾಗೂ ಕೆಳಮಟ್ಟದ ಎಲ್ಲ ನೀರು ಸಂಗ್ರಹಗಾರಗಳನ್ನು ಸ್ವಚ್ಛಗೊಳಿಸಿ, ಅದನ್ನು ದಾಖಲೀಕರಣ ಮಾಡಿಟ್ಟುಕೊಳ್ಳಬೇಕು, ಗ್ರಾಮಗಳಲ್ಲಿನ ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು, ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳನ್ನು (ಆರ್.ಒ ಪ್ಲಾಂಟ್‍ಗಳು) ಸುಸ್ಥಿತಿಯಲ್ಲಿರಿಸಿಕೊಳ್ಳಬೇಕು, ಒಂದು ವೇಳೆ ಕೆಟ್ಟು ಹೋಗಿರುವ ಬಗ್ಗೆ ದೂರುಗಳು ಬಂದಲ್ಲಿ, ತಕ್ಷಣ ಸ್ಪಂದಿಸಿ, ದುರಸ್ತಿಗೊಳಿಸಬೇಕು, ಎಫ್.ಟಿ.ಕೆ. (ಫೀಲ್ಡ್ ಟೆಸ್ಟ್ ಕಿಟ್) ಬಳಸಿ, ಕುಡಿಯುವ ನೀರಿನ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷೆಗೆ ಒಳಪಡಿಸಬೇಕು, ಶೀಘ್ರದಲ್ಲಿಯೇ ಹೊಸ ಎಫ್.ಟಿ.ಕೆ. ಕಿಟ್‍ಗಳನ್ನು ಪೂರೈಸಲಾಗುವುದು, ಗ್ರಾಮ ಪಂಚಾಯತ್‍ಗಳಿಗೆ ಸಕಾಲ ದಡಿ ವಿವಿಧ ಸೇವೆಗಳಿಗಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡುವಂತೆ ಜಿ.ಪಂ. ಸಿಇಒ ಅವರು ಸೂಚನೆ ನೀಡಿದರು.

ಗ್ರಾಮ ಪಂಚಾಯತ್‍ಗಳು ತಮ್ಮ ವ್ಯಾಪ್ತಿಯ ವಿವಿಧ ಖರ್ಚು ವೆಚ್ಚಗಳಿಗೆ ಸಂಬಂಧಿಸಿದ ಆಯ-ವ್ಯಯವನ್ನು ಸಿದ್ಧಮಾಡಿಕೊಳ್ಳಬೇಕು, ಉದ್ಯೋಗಖಾತ್ರಿ ಯೋಜನೆಯಡಿ ಬೇಡಿಕೆ ಬರುವ ಕೆಲಸಗಳಿಗೆ ಸಂಬಂಧಿಸಿದಂತೆ, ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಉದ್ಯೋಗ ನೀಡಬೇಕು, ಹಾಗೂ ಹೆಚ್ಚು, ಹೆಚ್ಚು ಮಾನವ ದಿನಗಳನ್ನು ಸೃಜಿಸಬೇಕು, ಕೆಲಸ ಪೂರ್ಣಗೊಳಿಸಿದ ಕೂಲಿ ಕಾರ್ಮಿಕರಿಗೆ ನಿಗದಿತ ಕಾಲಮಿತಿಯಲ್ಲಿ ಕೂಲಿ ಹಣ ಪಾವತಿ ಮಾಡಬೇಕು.  ಹದಿನೈದನೇ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆಯನ್ನು ತಂತ್ರಾಂಶದಲ್ಲಿ ಅಳವಡಿಸಬೇಕು.  ಗ್ರಾಮಗಳಲ್ಲಿ ವೈಯಕ್ತಿಕ ಶೌಚಾಲಯಕ್ಕಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ತಕ್ಷಣವೇ ಕಾರ್ಯಾದೇಶ ವಿತರಿಸಬೇಕು.  ಸರ್ಕಾರಿ ಶಾಲೆಗಳಲ್ಲಿರುವ ಮತಗಟ್ಟೆಗಳನ್ನು ಪರಿಶೀಲಿಸಿ, ಕನಿಷ್ಟ ಮೂಲಭೂತ ಸೌಕರ್ಯಗಳು ಇರುವುದನ್ನು ಖಚಿತಪಡಿಸಿಕೊಳ್ಳಬೇಕು, ಗ್ರಾಮ ಸಭೆಗಳಲ್ಲಿ ಹರ್ ಘರ್ ಜಲ್ ಘೋಷಣೆ ಮಾಡಬೇಕು, ಗ್ರಾಮ ಪಂಚಾಯತ್ ಗಳು ಪಿಒಎಸ್ ಯಂತ್ರಗಳನ್ನು ಬಳಸಿ, ತೆರಿಗೆಯನ್ನು ಸಂಗ್ರಹಿಸುವ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳಬೇಕು, ಈ ಬಗ್ಗೆ ಯಾವುದೇ ದೂರುಗಳಿಗೆ ಅವಕಾಶ ಕಲ್ಪಿಸಬಾರದು ಎಂದು ಜಿ.ಪಂ. ಸಿಇಒ ಸೋಮಶೇಖರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿ.ಪಂ. ಉಪಕಾರ್ಯದರ್ಶಿ ತಿಮ್ಮಪ್ಪ, ಮುಖ್ಯ ಯೋಜನಾಧಿಕಾರಿ ಸತೀಶ್ ರೆಡ್ಡಿ ಸೇರಿದಂತೆ ವಿವಿಧ ಅಧಿಕಾರಿಗಳು, ಆಯಾ ತಾಲ್ಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.