Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಂಪೂರ್ಣ ಹೊಟ್ಟೆಯೇ ಇಲ್ಲದೆ ಬದುಕುತ್ತಿದ್ದ, ಖ್ಯಾತ ಫುಡ್ ಬ್ಲಾಗರ್ ನತಾಶಾ ದಿಡ್ಡಿ ನಿಧನ

ಪುಣೆ : ಸಂಪೂರ್ಣ ಹೊಟ್ಟೆಯೇ ಇಲ್ಲದೆ ಬದುಕುತ್ತಿದ್ದ, ಖ್ಯಾತ ಫುಡ್ ಬ್ಲಾಗರ್, ‘ದ ಗಟ್ಲೆಸ್ ಫುಡೀ’ ನತಾಶಾ ದಿಡ್ಡಿ ತಮ್ಮ 50ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಹೊಟ್ಟೆಯೇ ಇಲ್ಲದೆ ಬದುಕಲು ಕಷ್ಟವೆಂದಿದ್ದಾಗ ತಮ್ಮ ಛಲದಿಂದ ಭಾರತದ ಅಗ್ರ ಆಹಾರ ಬ್ಲಾಗರ್‌ಗಳಲ್ಲಿ ಒಬ್ಬರಾಗಿ ಬದುಕಿದ ನತಾಶಾ ಬದುಕು ಹಲವರಿಗೆ ಸ್ಪೂರ್ತಿ. ಸಹೋದರ ಸ್ಯಾಮ್ ದಿಡ್ಡಿ ಕೂಡ ತನ್ನ ಪ್ರೀತಿಯ ಸಹೋದರಿಯನ್ನು ನೆನಪಿಸಿಕೊಂಡು ತನ್ನ ಕಿರಿಯ ಸಹೋದರಿ ನತಾಶಾ ಕಳೆದ 12 ವರ್ಷಗಳಿಂದ ಹೊಟ್ಟೆಯಿಲ್ಲದೆ ಬದುಕುತ್ತಿದ್ದಳು ಎಂದು ಬಹಿರಂಗಪಡಿಸಿದ್ದಾರೆ. ನತಾಶಾ ತನ್ನ ಹೊಟ್ಟೆಯನ್ನು ಕಳೆದುಕೊಂಡಾಗ, ಅವಳು ಅದನ್ನು ಹಿನ್ನಡೆಯಾಗಿ ತೆಗೆದುಕೊಳ್ಳಲಿಲ್ಲ.

ಆದರೆ ತನ್ನ ಪಾಕವಿಧಾನಗಳೊಂದಿಗೆ ಜಗತ್ತನ್ನು ಪ್ರೇರೇಪಿಸಲು ನಿರ್ಧರಿಸಿದಳು ಎಂದಿದ್ದಾರೆ. ನತಾಶಾ ತನ್ನ ಮೊದಲ ಮದುವೆಯಿಂದ ಹೊರಬಂದ ಒಂದು ವರ್ಷದ ನಂತರ ವಿಪರೀತ ಹೊಟ್ಟೆ ನೋವು, ಭುಜ ನೋವಿನಿಂದ ಬಳಲುತ್ತಿದ್ದಳು. ಆಕೆಯ ಭುಜದ ಮೇಲೆ ಎರಡು ಶಸ್ತ್ರಚಿಕಿತ್ಸೆಗಳು ಮತ್ತು ಮೂರು ಬಾರಿ ವಿಕಿರಣ ಚಿಕಿತ್ಸೆಯ ನಂತರವೂ ವೈದ್ಯರಿಗೆ ಅವಳ ನೋವನ್ನು ಪರಿಹರಿಸಲು ಸಾಧ್ಯವಾಗಲಿಲ್ಲ. ಕಡೆಗೆ ವೈದ್ಯರು ಹೊಟ್ಟೆಯಲ್ಲಿ ಟ್ಯೂಮರ್ ಪತ್ತೆ ಹಚ್ಚಿದ ಬಳಿಕ ಎಂಟು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ, ನತಾಶಾ ಹೊಟ್ಟೆಯನ್ನು ತೆಗೆದುಹಾಕಿದ್ದರು.

ನತಾಶಾಗೆ ಇದು ತನ್ನ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಕಾರಣ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಆಹಾರ-ಸಂಬಂಧಿತ ನಿರ್ಬಂಧಗಳೊಂದಿಗೆ ಬದುಕಿದ್ದಳು. ಡಂಪಿಂಗ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದ ನತಾಶಾ, ಏನು ತಿಂದರೂ ಅದು ನೇರವಾಗಿ ಕರುಳಿಗೆ ಹೋಗುತ್ತಿತ್ತು. ಇದರ ಅಡ್ಡ ಪರಿಣಾಮಗಳು ವಿಪರೀತವಾಗಿ ಬೆವರುವುದು, ವ್ಯಾಪಕವಾಗಿ ಆಕಳಿಕೆ ಮತ್ತು ಶೌಚಾಲಯಕ್ಕೆ ಅನೇಕ ಬಾರಿ ಓಡಾಡುವುದು ಸೇರಿದ್ದವು. ಇಷ್ಟೆಲ್ಲ ಸಮಸ್ಯೆ ಇದ್ದರೂ ನತಾಶಾ ರುಚಿರುಚಿಯಾದ ಅಡುಗೆಗಳನ್ನು ತಯಾರಿಸಿ ರೆಸಿಪಿಯನ್ನು ತಮ್ಮ ಪೇಜ್‌ನಲ್ಲಿ ಹಂಚಿಕೊಳ್ಳುತ್ತಿದ್ದರು.