Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಸಂಸತ್ ಭದ್ರತಾ ವೈಫಲ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು’- ಪ್ರಧಾನಿ ಮೋದಿ

ನವದೆಹಲಿ: ರಾಷ್ಟ್ರೀಯ ಭದ್ರತಾ ವಿಷಯವಾಗಿರುವುದರಿಂದ ರಾಜಕೀಯ ಪಕ್ಷಗಳು ಸಂಸತ್ ಭದ್ರತಾ ವೈಫಲ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸಂಸತ್ತಿನ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಂಸತ್ ಭದ್ರತಾ ವೈಫಲ್ಯ ಒಂದು ಗಂಭೀರ ವಿಷಯವಾಗಿದೆ. ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಸಂಸತ್ತಿನಲ್ಲಿ ನಡೆದ ಘಟನೆ ಆತಂಕಕಾರಿಯಾಗಿದೆ. ಈ ಬಗ್ಗೆ ಆಳವಾದ ತನಿಖೆ ನಡೆಯಬೇಕು ಎಂದರು.

ಸಂಸತ್ತಿನಲ್ಲಿ ನಡೆದ ಘಟನೆಯ ಗಂಭೀರತೆಯನ್ನು ಕಡೆಗಣಿಸಬಾರದು. ಹಾಗಾಗಿ ಲೋಕಸಭಾ ಸ್ಪೀಕರ್ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ಪರಸ್ಪರ ಜಗಳವಾಡುವುದು ಸರಿಯಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಘಟನೆಯ ಹಿನ್ನೆಲೆ…
ಡಿ. 13 ರಂದು ಕಲಾಪ ನಡೆಯುತ್ತಿರುವಾಗ ಸಾಗರ್ ಮತ್ತು ಮನೋರಂಜನ್ ಎಂಬ ಇಬ್ಬರು ಯುವಕರು ಸದನದೊಳಗೆ ನುಗ್ಗಿ ಸ್ಮೋಕ್ ಕ್ಯಾನ್ ಎಸೆದಿದ್ದರು. ಇದರಿಂದಾಗಿ ಲೋಕಸಭೆ ಪೂರ್ತಿ ಹೊಗೆ ತುಂಬಿದ್ದು, ಸದನದಲ್ಲಿ ಆತಂಕ ಸೃಷ್ಟಿಯಾಯಿತು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಲಲಿತ್ ಮೋಹನ್ ಝಾ ಸೇರಿ ಒಟ್ಟು 7 ಮಂದಿಯನ್ನು ಬಂಧಿಸಲಾಗಿದೆ.