Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸರ್ಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ- ಕೈ ನಾಯಕಿ ಸಂಧ್ಯಾ ಪವಿತ್ರಾ ವಿರುದ್ಧ ಕೇಸ್‌

ಬೆಂಗಳೂರು:ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿ, ಯುವಕರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಕಾಂಗ್ರೆಸ್ ನಾಯಕಿ ಎನ್ನಲಾದ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ಧ ಜ್ಞಾನಭಾರತಿ ಮತ್ತು ಜಯನಗರ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

ಮಾರುತಿ ನಗರ ನಿವಾಸಿ ವೀಣಾ ನೀಡಿದ ದೂರಿನ ಮೇರೆಗೆ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ಧ ಜ್ಞಾನಭಾರತಿ ಠಾಣೆ ಪೊಲೀಸರು ಗಂಭೀರ ಸ್ವರೂಪ ವಲ್ಲದ ಪ್ರಕರಣ (ಎನ್ಸಿಆರ್) ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲಕ ಪರಿಚಯವಾದ ಸಂಧ್ಯಾ, ಬಹುಮಹಡಿ ಕಟ್ಟಡದಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರೆ.
ಬಳಿಕ ಹಂತ ಹಂತವಾಗಿ 20 ಲಕ್ಷ ರೂ. ಹಣ ಪಡೆದುಕೊಂಡಿದ್ದಾರೆ. ಆದರೆ, ಎರಡು ವರ್ಷಗಳು ಕಳೆದರೂ ಇದುವರೆಗೆ ಕೆಲಸ ಕೊಡಿಸಿಲ್ಲ.ಹಣವನ್ನು ವಾಪಸ್ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವೀಣಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಇನ್ನೊಂದು ಪ್ರಕರಣದಲ್ಲಿ ರಂಗಸ್ವಾಮಿ ಮತ್ತು ಆತನ ಸಹೋದರಿ ರೂಪಾ ಎಂಬವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 11.20 ಲಕ್ಷ ರೂ. ಪಡೆದು ವಂಚಿಸಿದ್ದಾರೆ.

ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ನಿವಾಸಿ ರೂಪಾ ಎಂಬವರು 2023ರಲ್ಲಿ ಜಯನಗರ ಠಾಣೆಯಲ್ಲಿ ಸಂಧ್ಯಾ ಪವಿತ್ರಾ ನಾಗರಾಜ್, ಭಾನು ಪ್ರಕಾಶ್, ಹರೀಶ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.ಇನ್ನೊಂದು ಪ್ರಕರಣದಲ್ಲಿ ಯಾದಗಿರಿ ಮೂಲದ ಚಂದು ಎಂಬಾತನಿಂದ ಲಕ್ಷಾಂತರ ರೂ. ಪಡೆದುಕೊಂಡು ಕೆಲಸ ಕೊಡಿಸದೇ ಸಂಧ್ಯಾ ವಂಚಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಸಂಧ್ಯಾ ಪವಿತ್ರಾ ನಾಗರಾಜ್ ತೆಗೆಸಿಕೊಂಡಿರುವ ಫೋಟೋಗಳು ಹರಿದಾಡುತ್ತಿದ್ದು, ಈ ಫೋಟೋಗಳನ್ನು ತೋರಿಸಿಯೇ ಆಕೆ, ಕಾಂಗ್ರೆಸ್ ನಾಯಕಿ ಎಂದು ಹೇಳಿಕೊಂಡು ವಂಚಿಸುತ್ತಿದ್ದಳು ಎಂದು ಹೇಳಲಾಗಿದೆ.