Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಿಐಡಿಗೆ ವಕೀಲ ಪ್ರೀತಮ್‌ ಹಲ್ಲೆ ಪ್ರಕರಣದ ತನಿಖೆ ಹೊಣೆ: ಹೈಕೋರ್ಟ್‌ ಸಮ್ಮತಿ

ಬೆಂಗಳೂರು: ಚಿಕ್ಕಮಗಳೂರಿನ ವಕೀಲ ಪ್ರೀತಮ್‌ ಅವರ ಮೇಲಿನ ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣವನ್ನು ಸಿಐಡಿ ಸಿಐಡಿಗೆ ವಹಿಸಿರುವ ರಾಜ್ಯ ಸರಕಾರದ ನಿರ್ಧಾರಕ್ಕೆ ಸಮ್ಮತಿ ಸೂಚಿರುವ ಹೈಕೋರ್ಟ್‌, ಡಿಐಜಿ ದರ್ಜೆಯ ಉನ್ನತ ಅಧಿಕಾರಿಯಿಂದ ತನಿಖೆ ನಡೆಸಬೇಕು ಮತ್ತು ಇಡೀ ತನಿಖೆಯ ಮೇಲೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು (ಡಿಐಜಿ) ನಿಗಾ ಇಡಬೇಕು ಎಂದು ನಿರ್ದೇಶನ ನೀಡಿದೆ.

ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಚಿಕ್ಕಮಗಳೂರು ವಕೀಲರ ಸಂಘದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ಕೆ ಎನ್‌ ಫಣೀಂದ್ರ ಮತ್ತು ಡಿ ಆರ್‌ ರವಿಶಂಕರ್‌ ಅವರು ಪ್ರೀತಮ್‌ ಘಟನೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಇತರೆ ವಕೀಲರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಪೊಲೀಸರೂ ಪ್ರತಿಭಟನೆ ನಡೆಸಿದ್ದಾರೆ ಎಂದರು.

ಆಗ ಪೀಠವು “ಚಿಕ್ಕಮಗಳೂರು ವಕೀಲರು ನಿರಂತರವಾಗಿ ನ್ಯಾಯಾಲಯದ ಕಲಾಪದಿಂದ ದೂರ ಉಳಿಯಲಾಗದು. ಇದನ್ನು ಒಪ್ಪಲಾಗದು” ಎಂದಿತು. ಕಲಾಪ ಬಹಿಷ್ಕರಿಸುವುದಿಲ್ಲ ಮತ್ತು ಪ್ರತಿಭಟನೆ ಮುಂದುವರಿಸುವುದಿಲ್ಲ ಎಂದು ಫಣೀಂದ್ರ ಹಾಗೂ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರು ನೀಡಿದ ಹೇಳಿಕೆಯನ್ನು ನ್ಯಾಯಾಲಯವು ದಾಖಲಿಸಿಕೊಂಡಿತು.

ಈ ವೇಳೆ ಸರಕಾರದ ಪರ ಹಾಜರಾದ ಅಡ್ವೋಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಪ್ರಕರಣದಲ್ಲಿ ಸರಕಾರ ಈವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿ “ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುವುದು” ಎಂದರು

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ 5 ಎಫ್ಐಆರ್‌ಗಳ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದು ಆದೇಶದ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು