Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹಣಕಾಸು ಆಯೋಗದ ಶಿಫಾರಸ್ಸಿನಲ್ಲಿ ಕೇಂದ್ರ ಸಚಿವರಿಗೆ ಆಟವಾಡಲು ಸಾಧ್ಯವಿಲ್ಲ: ನಿರ್ಮಲಾ ಸೀತಾರಾಮನ್

ನವದೆಹಲಿ: ತೆರಿಗೆ ಅನ್ಯಾಯ ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿಭಟನೆಯನ್ನು ಉಲ್ಲೇಖಿಸಿದ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಪ್ರಸ್ತಾಪಕ್ಕೆ ಇದೀಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್ ಅವರು, ಕಳೆದ ಎರಡು ದಿನಗಳಿಂದ ತೆರಿಗೆ ಹಣದಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಕೂಗೂ ಕೇಳಿಬರುತ್ತಿದೆ. ಆದರೆ ಹಣಕಾಸು ಆಯೋಗದ ಶಿಫಾರಸುಗಳೊಂದಿಗೆ ಯಾವುದೇ ಕೇಂದ್ರ ಹಣಕಾಸು ಸಚಿವರಿಗೆ ಆಟವಾಡಲು ಸಾದ್ಯವಿಲ್ಲ.

ಹಣಕಾಸು ಆಯೋಗದ ಶಿಫಾರಸು ಆಧರಿಸಿ ರಾಜ್ಯಗಳಿಗೆ ಅನುದಾನ ನೀಡಲಾಗುತ್ತಿದ್ದು, ಇದರ ಜೊತೆಗೆ ಜಿಎಸ್‌ಟಿ ಅದರಲ್ಲೂ ರಾಜ್ಯಗಳ ಪಾಲಿನ ಜಿಎಸ್‌ಟಿಯನ್ನು ನೂರಕ್ಕೆ ನೂರರಷ್ಟು ರಾಜ್ಯಗಳಿಗೆ ನೀಡಲಾಗುತ್ತಿದೆ. ಉಳಿದಂತೆ ಆಯೋಗದ ಶಿಫಾರಸು ಉಲ್ಲಂಘಿಸಿ ರಾಜ್ಯಗಳ ನಡುವೆ ತಾರತಮ್ಯ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಹಣಕಾಸು ಆಯೋಗವು ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಶಿಫಾರಸು ಮಾಡುತ್ತದೆ. ಇದು ರಾಜ್ಯ ಸರ್ಕಾರಗಳಿಗೂ ತಿಳಿದ ವಿಚಾರ. ಈ ನಿಜಾಂಶ ಬಿಟ್ಟು ರಾಜಕೀಯ ಆರೋಪ ಮಾಡಲಾಗುತ್ತಿದೆ. ನೀವು ಬೇಕಾಬಿಟ್ಟಿ ಹಣ ಖರ್ಚು ಮಾಡಿ ನಿಮ್ಮ ರಾಜ್ಯದ ಬಜೆಟ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಕೇಂದ್ರ ಸರ್ಕಾರವನ್ನು ದೂರಬೇಡಿ ಎಂದು ಕಿಡಿಕಾರಿದ್ದಾರೆ.