Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘100 ಮದರಸಾಗಳಲ್ಲಿ ಕನ್ನಡ, ಇಂಗ್ಲಿಷ್‌ ವಿಜ್ಞಾನ, ಗಣಿತ ಪ್ರಾಯೋಗಿಕ ಬೋಧನೆಗೆ ನಿರ್ಧಾರ’- ಕೃಷ್ಣ ಬೈರೇಗೌಡ

ಬೆಳಗಾವಿ,: ರಾಜ್ಯದ 100 ಮದರಸಾಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಎರಡು ವರ್ಷ ಕನ್ನಡ, ಇಂಗ್ಲಿಷ್‌, ವಿಜ್ಞಾನ, ಗಣಿತ ಹಾಗೂ ಇತರ ವಿಷಯಗಳನ್ನು ಪ್ರಾಯೋಗಿಕವಾಗಿ ಬೋಧಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಜೆಡಿಎಸ್‌ ಸದಸ್ಯ ಬಿ.ಎಂ.ಫಾರೂಖ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ನೋಂದಾಯಿತ ವಕ್ಫ್‌ ಆಸ್ತಿಗಳಲ್ಲಿ ಹಾಗೂ ವಕ್ಫ್‌ ಸಂಸ್ಥೆಗಳು ನಡೆಸುತ್ತಿರುವ ಮದರಸಾಗಳಲ್ಲಿ ಕಲಿಯುತ್ತಿರುವ ಮಕ್ಕಳು ಕೇವಲ ಧಾರ್ಮಿಕ ವಿಷಯಗಳನ್ನು ಕಲಿಯುವುದರಿಂದ ಅವರು ಸಮಾಜದ ಮುಖ್ಯವಾಹಿನಿಯಿಂದ ವಿಮುಖರಾಗುತ್ತಾರೆ ಎಂಬ ಕಾರಣದಿಂದ ಸದ್ಯ 100 ಮದರಸಾಗಳಲ್ಲಿ ಇತರ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ ಎಂದರು.

ಎರಡು ವರ್ಷಗಳ ಕಾಲ ಬೋಧಿಸಿ ಎಸ್‌ ಎಸ್‌ ಎಲ್‌ ಸಿ, ಪಿಯುಸಿ, ಮತ್ತು ಪದವಿಯನ್ನು ರಾಜ್ಯ- ರಾಷ್ಟ್ರೀಯ ಮುಕ್ತ ಶಾಲೆಗಳ ಮೂಲಕ ಶಿಕ್ಷಣ ಕೈಗೊಳ್ಳಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಈ ಕುರಿತು ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ ಎಂದರು.

ಮದರಸಾಗಳಲ್ಲಿ ವೈವಿಧ್ಯಮಯ ವಿಷಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಳ್ಳುವ ಸಮಸ್ಯೆಯನ್ನು ಪರಿಹರಿಸಲು ಈ ವರ್ಷದಿಂದ 100 ಶಾಲೆಗಳಲ್ಲಿ ಪ್ರಾಯೋಗಿಕ ಶಿಕ್ಷಣವನ್ನು ಪರಿಚಯಿಸಲಾಗುವುದು. ಹಲವು ವರ್ಷಗಳ ಚರ್ಚೆ ಮತ್ತು ಸರ್ಕಾರದ ಪಾಲ್ಗೊಳ್ಳುವಿಕೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.