16 ಸಾವಿರ ಜನರಿಗೆ ವಂಚಿಸಿದ ಮಹಿಳೆಗೆ 1.41 ಲಕ್ಷ ವರ್ಷಗಳ ಸೆರೆವಾಸ – ಜೈಲು ಶಿಕ್ಷೆಯ ಪ್ರಮಾಣಕ್ಕೆ ವಿಶ್ವವೇ ನಿಬ್ಬೆರಗು
ಯಾವುದೇ ತಪ್ಪು ಮಾಡಿದರೂ ಅದಕ್ಕೆ ಕಾನೂನಿನಲ್ಲಿ ಇಂತಿಷ್ಟು ದಿನ, ತಿಂಗಳು ಅಥವಾ ವರ್ಷಗಳ ಕಾಲ ಶಿಕ್ಷೆ ಹಾಗೂ ದಂಡವನ್ನು ನ್ಯಾಯಾಲಯಗಳು ವಿಧಿಸುತ್ತವೆ. ಕೆಲವೊಂದು ಪ್ರಕರಣಗಳಲ್ಲಿ ಕಠಿಣ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುತ್ತದೆ. ನಮ್ಮ ದೇಶದಲ್ಲೂ ಕೂಡಾ ಅಷ್ಟೆ ಆಯಾ ಪ್ರಕರಣಗಳಿಗೆ ತಕ್ಕಂತೆ ಆರು ತಿಂಗಳು, ಒಂದು ವರ್ಷ, ಆರು ವರ್ಷ ಅಥವಾ ಜೀವಾವದಿ ಶಿಕ್ಷೆಯನ್ನು ವಿಧಿಸುತ್ತಾರೆ. ಆದರೆ, ಇಲ್ಲೊಂದು ಆಘಾತಕಾರಿ ಶಿಕ್ಷೆಯ ಪ್ರಮಾಣ ಘೋಷಣೆಯಾಗಿದೆ. ಅದೂ ಮೋಸ ಮಾಡಿದ ಪ್ರಕರಣಕ್ಕೆ ಇಷ್ಟೊಂದು ವರ್ಷಗಳ ಕಾಲ ಶಿಕ್ಷೆ ವಿಧಿಸುತ್ತಾರಾ ಎಂದು ವಿಶ್ವದ ಜನ ನಿಬ್ಬೆರಗಾಗಿದ್ದಾರೆ. ಸಾಮಾನ್ಯವಾಗಿ ಮೋಸದ ಪ್ರಕರಣಕ್ಕೆ ಕಾನೂನಿನ ಪ್ರಕಾರ ಎಷ್ಟು ಶಿಕ್ಷೆಯಾಗಬಹುದು ಅಬ್ಬಬ್ಬಾ ಅಂದರೆ ಆರು ತಿಂಗಳು ಅಥವಾ ಒಂದು ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಬಹುದು. ಆದರೆ, ಈ ಮಹಿಳೆಗೆ 1,41,078 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಇಷ್ಟು ದೀರ್ಘಾವಧಿಯ ಸೆರೆವಾಸ ವಿಚಿತ್ರ ಎನಿಸಬಹುದು. ಆದರೆ ಇದು ನಿಜಸಂಗತಿ. ಥಾಯ್ಲೆಂಡ್‌ನ ಚಮೋಯ್ ಥಿಪ್ಯಾಸೊ ಎಂಬ ಈ ದುಷ್ಟ ಮಹಿಳೆ 16,000 ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಳು. ಇದಕ್ಕಾಗಿ ಆಕೆಗೆ 1,41,078 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಮಹಿಳೆ ಸುಮಾರು 16.5 ಶತಕೋಟಿ ರೂಪಾಯಿಗಳನ್ನು ದೋಚಿದ್ದಳು. ಉಳಿತಾಯ ಯೋಜನೆಯ ಹೆಸರಿನಲ್ಲಿ ತಿಪ್ಯಾಸೋ ವಂಚನೆಯ ಸಂಚು ಹೆಣೆದಿದ್ದಳು. ಹಣಕಾಸು ಕಂಪನಿ ಮತ್ತು ಹೂಡಿಕೆ ಯೋಜನೆ ನಡೆಸುವ ಮೂಲಕ ಈಕೆ ಜನರನ್ನು ವಂಚಿಸುತ್ತಿದ್ದಳು.