20 ರೂ. ದೇಣಿಗೆ ನೀಡಿದ ವೃದ್ದೆಗೆ ಅಯೋಧ್ಯೆ ಸಮಾರಂಭಕ್ಕೆ ಅಹ್ವಾನ
ಅಯೋಧ್ಯೆ: ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಹಲವಾರು ಭಕ್ತರು ತಮ್ಮ ಕೈಲಾದಷ್ಟು ಹಾಗೂ ತಮ್ಮ ಶಕ್ತಿಗೂ ಮೀರಿ ದೇಣಿಗೆಯನ್ನು ನೀಡಿದ್ದಾರೆ. ಇದೇ ರೀತಿ ಛತ್ತೀಸ್ಗಢದ ಪ್ರಯಾಗ್ರಾಜ್ ಎಂದೂ ಕರೆಯಲ್ಪಡುವ ರಾಜೀಮ್ ನಲ್ಲಿ ಕಸ ಸಂಗ್ರಹಿಸುವ ಬಿಹುಲಾ ಬಾಯಿ ಕೂಡ 20 ರೂ. ದೇಣಿಗೆಯನ್ನು ನೀಡಿದ್ದಾರೆ. ಇದಕ್ಕಾಗಿ ಅಯೋಧ್ಯೆಯ ರಾಮಮಂದಿರದಲ್ಲಿನ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಗಿದೆ.
ಬಿಹುಲಾ ಬಾಯಿ ಅವರು ಪ್ರತಿನಿತ್ಯ ಕಸ ಸಂಗ್ರಹಿಸಿ ಅದರಿಂದ ಬರುವ ಹಣದಲ್ಲಿ ಜೀವನ ಸಾಗಿಸುವ ಓರ್ವ ವೃದ್ಧ ಮಹಿಳೆ. ಇವರು ಒಂದು ವರ್ಷದ ಹಿಂದೆ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಕಾರ್ಯ ನಡೆಯುತ್ತಿದ್ದ ವೇಳೆ ತಮ್ಮ ಇಡೀ ದಿನ ಕಸ ಸಂಗ್ರಹಿಸಿ ಬಂದ 40 ರೂ. ಸಂಪಾದನೆಯಲ್ಲಿ 20 ರೂ. ಹಣವನ್ನು ದೇಣಿಗೆಯಾಗಿ ನೀಡಿದ್ದರು.
ಬಿಹುಲಾ ಬಾಯಿ ಅವರು ಶ್ರೀರಾಮ ಮಂದಿರ ನಿರ್ಮಾಣಕ್ಕೆ ನೀಡಿದ್ದ ದೇಣಿಗೆಯನ್ನು ಗಮನಿಸಿ ಹಿಂದೂ ಸಂಘಟನೆಗಳು ಬಿಹುಲಾ ಬಾಯಿ ಅವರ ಗುಡಿಸಿಲಿಗೆ ತೆರಳಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿವೆ.
ಇನ್ನು ಕಾರ್ಯಕ್ರಮಕ್ಕೆ ಆಹ್ವಾನ ಸ್ವೀಕರಿಸಿದ ಬಿಹುಲಾ ಬಾಯಿ ಅವರು ಭಾವುಕರಾಗಿ ಮಾತನಾಡಿ, ಇದೀಗ ನನ್ನ ಬದುಕಲ್ಲಿ ಸಂತೋಷದ ಹೊಳೆ ಹರಿದಿದೆ. ಕಸ ಆರಿಸಿ ಬಂದ 40 ರೂ. ಹಣದಲ್ಲಿ 20 ರೂ. ಅನ್ನು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಿದ್ದೇನೆ. ಈಗ ನನಗೆ ಅಯೋಧ್ಯೆಗೆ ಆಹ್ವಾನ ಬಂದಿದ್ದು, ಇದರಿಂದ ನನಗೆ ಅತ್ಯಂತ ಸಂತೋಷವಾಗಿದೆ ಹಾಗೂ ನಾನು ಶ್ರೀರಾಮನ ದರ್ಶನ ಪಡೆಯಲು ಅಯೋಧ್ಯೆಗೆ ತೆರಳುತ್ತೇನೆ. ನನ್ನ ವೃದ್ಧಾಪ್ಯದಲ್ಲಿ ಅಯೋಧ್ಯೆಗೆ ತೆರಳುತ್ತಿರುವುದಕ್ಕೆ ನನಗೆ ಸಂತಸವಾಗಿದೆ ಎಂದರು.