Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

2000 ರೂ. ನೋಟಿನ ಬಗ್ಗೆ ಮತ್ತೊಂದು ಪ್ರಕಟಣೆ ಹೊರಡಿಸಿದ ಆರ್‌ಬಿಐ!

ನವದೆಹಲಿ: ಎರಡು ಸಾವಿರ ರೂಪಾಯಿ ನೋಟುಗಳನ್ನು ಹಿಂಪಡೆಯುವುದಾಗಿ ಆರ್‌ಬಿಐ ಇದೇ ವರ್ಷ ಮೇ 19ರಂದು ಸುತ್ತೋಲೆ ಹೊರಡಿಸಿತ್ತು. ಇದೀಗ ಮತ್ತೊಂದು ಪ್ರಕಟಣೆ ಹೊರಡಿಸಿದ್ದು, ಆದಷ್ಟು ಬೇಗ 2000 ಮುಖಬೆಲೆಯ ನೋಟು ಹಿಂತಿರುಗಿಸುವಂತೆ ಮನವಿ ಮಾಡಿದೆ.

2023ರ ಮಾರ್ಚ್ 31ಕ್ಕೆ 3.62 ಲಕ್ಷ ಕೋಟಿ ರೂಪಾಯಿಯಷ್ಟಿದ್ದ 2 ಸಾವಿರ ರೂ ನೋಟುಗಳು ಮೇ 19ಕ್ಕೆ 3.56 ಲಕ್ಷ ಕೋಟಿ ರೂ.ಗೆ ಇಳಿದಿತ್ತು. ಜು. 31ರ ಅಂಕಿ-ಅಂಶದಂತೆ ಎಲ್ಲ ಬ್ಯಾಂಕ್​ಗಳಿಗೆ ಒಟ್ಟು 3.14 ಲಕ್ಷ ಕೋಟಿ ಮೊತ್ತದ 2 ಸಾವಿರ ರೂ. ನೋಟುಗಳು ವಾಪಸ್ ಬಂದಿವೆ.

ಅಂದರೆ ಮೇ 19ರ ವರೆಗೆ ಹೊರಗಡೆ ಚಲಾವಣೆಯಲ್ಲಿದ್ದ 2 ಸಾವಿರ ರೂ. ನೋಟುಗಳ ಪೈಕಿ ಶೇ. 88 ಬ್ಯಾಂಕ್​ಗೆ ಮರಳಿಸಲ್ಪಟ್ಟಿವೆ. ಅರ್ಥಾತ್​, 0.42 ಲಕ್ಷ ಕೋಟಿ ರೂ. ಮೊತ್ತದ 2 ಸಾವಿರ ರೂ. ನೋಟುಗಳು ಇನ್ನೂ ಚಲಾವಣೆಯಲ್ಲಿವೆ.

ವಾಪಸ್​ ಬಂದಿರುವ ನೋಟುಗಳ ಪೈಕಿ ಶೇ. 87 ಠೇವಣಿ ರೂಪದಲ್ಲಿ ಹಾಗೂ ಶೇ. 13 ವಿನಿಮಯ ರೂಪದಲ್ಲಿ ಸಂಗ್ರಹಗೊಂಡಿವೆ. ಅದಾಗ್ಯೂ ಇನ್ನೂ 0.42 ಲಕ್ಷ ಕೋಟಿ ರೂ. ಮೊತ್ತದ 2 ಸಾವಿರ ರೂ. ನೋಟುಗಳು ಚಲಾವಣೆಯಲ್ಲಿದ್ದು, ಅವುಗಳೂ ಬ್ಯಾಂಕ್​ಗೆ ಮರಳಬೇಕಾಗಿವೆ. ಹೀಗೆ 2 ಸಾವಿರ ರೂ. ನೋಟು ಹಿಂದಿರುಗಿಸಲು ಸೆ. 30 ಕಡೇ ದಿನವಾಗಿದ್ದು,

ಕೊನೆಯ ಹಂತದ ಗಡಿಬಿಡಿ ಜನಜಂಗುಳಿಯನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕರು ಆದಷ್ಟು ಬೇಗ 2 ಸಾವಿರ ರೂ. ನೋಟುಗಳನ್ನು ಬ್ಯಾಂಕ್​ಗಳಿಗೆ ಹಿಂದಿರುಗಿಸಬೇಕು ಎಂದು ಆರ್​ಬಿಐ ಮನವಿ ಮಾಡಿಕೊಂಡಿದೆ.