City Big News Desk.
ಧಾರವಾಡ: ರಾಜ್ಯದಲ್ಲಿ ಮುಂಗಾರು ಮಳೆ ಬರದ ಕಾರಣ ರೈತರು ಕಂಗಾಲಾಗಿದ್ದಾರೆ. ಇನ್ನು ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು ಧಾರವಾಡ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗಿದ್ದು ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿ ಕುಸಿದು ಬಿದ್ದು ನಾಲ್ಕು ಜನ ಮಕ್ಕಳಿಗೆ ಗಾಯವಾಗಿದೆ.
ಹೌದು, ಧಾರವಾಡದಲ್ಲಿಯೂ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಈಗ ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ಆತಂಕ ಶುರುವಾಗಿದೆ. ಜತೆಗೆ ರಾಜ್ಯದಲ್ಲಿ ಶಾಲಾ ಕಟ್ಟಡದ ಸಮಸ್ಯೆಗಳು ಆಗಾಗ ಕೇಳಿ ಬರುತ್ತಲೇ ಇವೆ. ಹಲವು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ ಇದ್ದು ಮಕ್ಕಳು ಹಾಗೂ ಶಿಕ್ಷಕರು ಜೀವ ಕೈಯಲ್ಲಿ ಹಿಡಿದು ಶಾಲೆ ಒಳಗೆ ಪ್ರವೇಶ ಮಾಡಬೇಕಿದೆ.
ಇಂಥ ಪರಿಸ್ಥಿತಿಯಲ್ಲಿಯೂ ಶಿಕ್ಷಣ ಇಲಾಖೆ ಶಿಥಿಲಾವಸ್ಥೆ ತಲುಪಿದ ಕಟ್ಟಡಗಳ ಬಗ್ಗೆ ಗಮನಹರಿಸದೇ ಇರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ತಾಲೂಕಿನ ಬೋಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಛಾವಣಿ ಕುಸಿದು ನಾಲ್ವರು ಮಕ್ಕಳಿಗೆ ಗಾಯಗಳಾಗಿವೆ. ಹೀಗಾಗಿ ಶಿಕ್ಷಣ ಸಚಿವರೇ ಇತ್ತ ನೋಡಿ ಎಂದು ಇಲ್ಲಿನ ಪೋಷಕರು ಆಗ್ರಹಿಸಿದ್ದಾರೆ.
ಮಂಗಳವಾರದಿಂದ ಸತತ ಮಳೆಯಾಗುತ್ತಿದ್ದು ಮೊದಲೇ ಶಿಥಿಲಾವಸ್ಥೆ ತಲುಪಿದ್ದ ಬೋಗೂರು ಗ್ರಾಮದ ಸರ್ಕಾರಿ ಶಾಲೆಯ 8ನೇ ತರಗತಿ ಕೊಠಡಿಯ ಛಾವಣಿ ಕುಸಿದಿದೆ. ಈ ವೇಳೆ ಪಾಠ ಕೇಳುತ್ತಿದ್ದ ಮಕ್ಕಳ ಮೇಲೆ ಅದು ಬಿದ್ದಿದೆ. ಛಾವಣಿ ಕೆಳಗೆ ಇದ್ದ ನಾಲ್ಕು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಕೂಡಲೇ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಹಳೆಯ ಕಟ್ಟಡವಾಗಿದ್ದರಿಂದ ಛಾವಣಿ ಸಹ ದುಃಸ್ಥಿತಿಯಲ್ಲಿದೆ. ಆದರೆ, ಇದರ ದುರಸ್ತಿಗೆ ಮಾತ್ರ ಇನ್ನೂ ಕ್ರಮ ಕೈಗೊಳ್ಳದಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.