Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಂಡ್ಯಗೆ ಬರಲಿದ್ದಾರೆ ಬರಾಕ್‌ ಒಬಾಮಾ, ದಲೈಲಾಮಾ

ಬರಾಕ್‌ ಒಬಾಮಾ ದಂಪತಿ ಭೇಟಿ ನೀಡಲಿರುವ ಮಂಡ್ಯದ ಹಲ್ಲೆಗೆರೆಯಲ್ಲಿ ಹೆಲಿಪ್ಯಾಡ್‌ ಹಾಗೂ ಇತರೆ ಮೂಲಸೌಕರ್ಯ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಮಂಡ್ಯದ ಹಲ್ಲೆಗೆರೆಯ ಭೂತಾಯಿ ಟ್ರಸ್ಟ್‌ನ ಅಧ್ಯಕ್ಷ, ಅಮೆರಿಕದ ವೈದ್ಯ ಡಾ. ಲಕ್ಷ್ಮಿನರಸಿಂಹ ಮೂರ್ತಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಶಾಸಕರಾದ ರವಿಕುಮಾರ್ ಗಣಿಗ, ಬಾಬು ಬಂಡಿಸಿದ್ದೇಗೌಡ ನೇತೃತ್ವದ ನಿಯೋಗವು ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ಟ್ರಸ್ಟ್‌ನಿಂದ ಮಂಡ್ಯದ ಹಲ್ಲೆಗೆರೆಯಲ್ಲಿ ನಿರ್ಮಿಸುತ್ತಿರುವ ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರ ಶಂಕುಸ್ಥಾಪನೆಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಂಪತಿ, ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಡಿಸೆಂಬರ್ ತಿಂಗಳಲ್ಲಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಲ್ಲೆಗೆರೆಯಲ್ಲಿ ಹೆಲಿಪ್ಯಾಡ್, ರಸ್ತೆ, ಚರಂಡಿ, ವಿದ್ಯುದೀಪ, ಕುಡಿಯುವ ನೀರು ಮುಂತಾದ ಸೌಕರ್ಯಗಳನ್ನು ಸರ್ಕಾರದ ವತಿಯಿಂದ ಒದಗಿಸಿ ಕೊಡುವಂತೆ ನಿಯೋಗವು ಮನವಿ ಮಾಡಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅವರು, ‘ನೀವು ಮಾಡುವ ಒಳ್ಳೆಯ ಕಾರ್ಯಗಳಿಗೆ ನಿಮ್ಮ ಜೊತೆ ನಾವಿದ್ದೇವೆ. ಬೇಕಾದ ಎಲ್ಲ ಬೆಂಬಲ ನೀಡಲಿದ್ದೇವೆ. ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ.