Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಕರ್ನಾಟಕ ಉದ್ಯೋಗದಾತರ ತವರು ಆಗುವುದರಲ್ಲಿ ಸಂಶಯವಿಲ್ಲ’: ಡಿಕೆಶಿ ವಿಶ್ವಾಸ

ಬೆಂಗಳೂರು: ಕರ್ನಾಟಕ ಉದ್ಯೋಗದಾತರ ತವರು ಆಗುವುದರಲ್ಲಿ ಸಂಶಯವಿಲ್ಲ: ಡಿಸಿಎಂ ಶಿವಕುಮಾರ್ ವಿಶ್ವಾಸ ಕರ್ನಾಟಕ ಕೇವಲ ಉದ್ಯೋಗಿಗಳು, ಕೆಲಸಗಾರರನ್ನು ಎದುರು ನೋಡುತ್ತಿಲ್ಲ, ಉದ್ಯೋಗ ಸೃಷ್ಟಿ ಮಾಡುವವರನ್ನು ಎದುರು ನೋಡುತ್ತಿದೆ. ಇದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿ ನಮ್ಮ ರಾಜ್ಯವು ಉದ್ಯೋಗದಾತರ ತವರು ಆಗುವುದರಲ್ಲಿ ಸಂಶಯವಿಲ್ಲ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕರ್ನಾಟಕ ಟೆಕ್ ಸಮ್ಮಿಟ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು“ಸಶಕ್ತ ಹಾಗೂ ಸದೃಢ ಸರ್ಕಾರ ಈಗ ಕರ್ನಾಟಕದಲ್ಲಿದೆ. ಕರ್ನಾಟಕ ಅತ್ಯಂತ ಸಮರ್ಥವಾದ ಮಾನವ ಸಂಪನ್ಮೂಲವನ್ನು ಹೊಂದಿದೆ. ಬೆಂಗಳೂರು ಹೊರತುಪಡಿಸಿ ಇತರೆಡೆ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಮಹತ್ವವನ್ನು ನಮ್ಮ ಸರ್ಕಾರ ನೀಡಲಿದೆ. ಈ ವಿಚಾರ ನಮ್ಮ ಪ್ರಣಾಳಿಕೆಯಲ್ಲೂ ಉಲ್ಲೇಖಿಸಿದ್ದೇವೆ. ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ, ನೀವು ಹೆಚ್ಚಿನ ಶಕ್ತಿಯನ್ನು ಸರ್ಕಾರಕ್ಕೆ ನೀಡಬೇಕು.

100 ದಿನಗಳಲ್ಲಿ ನಾವು ನೀಡಿದ ಪ್ರಮುಖ ವಾಗ್ದಾನಗಳನ್ನು ಈಡೇರಿಸಿದ್ದೇವೆ. ಮುಂದಿನ 100 ದಿನಗಳಲ್ಲಿ ಯಾವ, ಯಾವ ಯೋಜನೆಗಳನ್ನು ಜಾರಿಗೆ ತರಬೇಕು ಎನ್ನುವ ಯೋಜನೆ ಹಾಕಿಕೊಂಡಿದ್ದೇವೆ. 100 ದಿನಗಳಲ್ಲಿ ಸಾಕಷ್ಟು ಮಂದಿ ಉದ್ಯಮಿಗಳನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಬಗ್ಗೆ ಚರ್ಚೆ ಮಾಡಲಾಗುವುದು. ನಮ್ಮ ರಾಜ್ಯ ಎಲ್ಲ ರಂಗಳಲ್ಲಿಯೂ ಮುಂಚೂಣಿಯಲ್ಲಿ ಇರಬೇಕು ಎಂಬುದು ನಮ್ಮ ಅಭಿಲಾಷೆ.

ಬೆಂಗಳೂರು ವೈವಿದ್ಯತೆಯಲ್ಲಿ ಏಕತೆ ಹೊಂದಿರುವ, ಅತ್ಯಂತ ಸುರಕ್ಷಿತ, ಆರೋಗ್ಯಯುತವಾದ ನಗರ. ರಾಜ್ಯದ ಜನಸಂಖ್ಯೆಯ ಶೇ 34 ರಷ್ಟು ಜನಸಂಖ್ಯೆ ರಾಜ್ಯ ರಾಜಧಾನಿಯಲ್ಲೇ ಇದೆ, ಬ್ರಾಂಡ್ ಬೆಂಗಳೂರಿನ ಘನತೆ ಹೆಚ್ಚಿಸಲು ಸುಮಾರು 80 ಸಾವಿರಕ್ಕೂ ಹೆಚ್ಚು ಸಲಹೆಗಳನ್ನು ನಮ್ಮ ಜನರು ನೀಡಿದ್ದಾರೆ.

ಬೆಂಗಳೂರು ಪ್ರಸ್ತುತ ಸಂಚಾರ ದಟ್ಟಣೆ ಸಮಸ್ಯೆ ಎದುರಿಸುತ್ತಿದೆ. ಸಮಯ ಅತ್ಯಂತ ಅಮೂಲ್ಯವಾದುದು. ಈ ವಿಚಾರವಾಗಿ ಕೆಲವೇ ದಿನಗಳಲ್ಲಿ ಯೋಜನೆಯನ್ನು ಪ್ರಸ್ತುತ ಪಡಿಸುತ್ತೇವೆ. ಏಕೆಂದರೆ ತಕ್ಷಣಕ್ಕೆ ಸಮಾಧಾನಕ್ಕೆ ಏನಾದರೂ ಹೇಳಬಹುದು ಆದರೆ “ನುಡಿದಂತೆ ನಡೆಯುವ” ನಾವು ಸುಮ್ಮನೆ ಭರವಸೆ ನೀಡಬಾರದು.

2013-18ರ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಇಂಧನ ಸಚಿವನಾದಾಗ ರಾಜ್ಯದಲ್ಲಿ 10 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುತಿತ್ತು. ಸರ್ಕಾರದ ಅವಧಿ ಮುಗಿಯುವ ಹೊತ್ತಿಗೆ ಅದನ್ನು 23 ಸಾವಿರ ಮೆ.ವ್ಯಾಟ್ ಗೆ ಏರಿಕೆ ಮಾಡಿದ್ದೆವು. ಇಡೀ ಏಷ್ಯಾದಲ್ಲಿಯೆ ಅತ್ಯಂತ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದೆವು, ಈ ಯೋಜನೆಗೆ ಒಂದಿಂಚೂ ಭೂಮಿಯನ್ನೂ ನಾವು ವಶಪಡಿಸಿಕೊಳ್ಳದೆ ಸಾಕಾರಗೊಳಿಸಿದೆವು.

ಹೊಸ ಐಟಿ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸುವ ಯೋಚನೆಯಲ್ಲಿದ್ದು ಹೆಚ್ಚಿನ ಉದ್ಯೋಗ ಸೃಷ್ಟಿ ನಮ್ಮ ಆದ್ಯತೆ, ಕೇವಲ ಇದೊಂದೆ ಕ್ಷೇತ್ರಕ್ಕೆ ನಾವು ಗಮನ ಹರಿಸುತ್ತಿಲ್ಲ. ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಸಾಕಷ್ಟು ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ತುದಿಗಾಲಲ್ಲಿ ನಿಂತಿದ್ದೇವೆ. ಕರ್ನಾಟಕದ ಬೆಳವಣಿಗೆಗೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ಮನವಿ ಮಾಡಿಕೊಂಡರು.