Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿಮಾನದಲ್ಲಿ ತಾಂತ್ರಿಕ ದೋಷ – ಶೃಂಗಸಭೆ ಮುಗಿದರೂ ಭಾರತದಲ್ಲೇ ಉಳಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ

ನವದೆಹಲಿ : ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆ ಯಶಸ್ವಿಯಾಗಿದೆ. 2 ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ವಿಶ್ವ ನಾಯಕರು ಹಲವು ಮಹತ್ತರ ಹೆಜ್ಜೆಗಳನ್ನು ಇಟ್ಟರು. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಶೃಂಗಸಭೆ ಯಶಸ್ವಿಯಾಗಿದೆ. ಇನ್ನು, ಶೃಂಗಸಭೆ ಮುಗಿಯುತ್ತಿದ್ದಂತೆ ನಿನ್ನೆಯೇ ಎಲ್ಲ ಜಿ20 ದೇಶಗಳ ಪ್ರತಿನಿಧಿಗಳು ವಾಪಸ್ ತಮ್ಮ ತಮ್ಮ ದೇಶಗಳಿಗೆ ತೆರಳಿದರು. ಆದರೆ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮಾತ್ರ ತಮ್ಮ ನಿಯೋಗದೊಂದಿಗೆ ದೆಹಲಿಯಲ್ಲೇ ವಾಸ ಮಾಡುವಂತಾಯಿತು. 2 ದಿನಗಳ ಜಿ20 ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಭಾನುವಾರ ರಾತ್ರಿ ದೆಹಲಿಯಲ್ಲೇ ಕಳೆಯುವಂತಾಗಿದೆ. ಜಿ20 ಶೃಂಗಸಭೆ ಮುಗಿಸಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೊರಡಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಈ ಕಾರಣದಿಂದ ನಿನ್ನೆ ರಾತ್ರಿ ಟ್ರುಡೊ ದೆಹಲಿಯಲ್ಲಿಯೇ ಉಳಿದುಕೊಂಡಿದ್ದಾರೆ. ರಾತ್ರಿ 8 ಗಂಟೆಗೆ ಹೊರಡಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ಪ್ರಯಾಣಿಸಬೇಕಿದ್ದ CFC001 ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂದು ಕೆನಡಾದ ಸಶಸ್ತ್ರ ಪಡೆ ಹೇಳಿದೆ. ವಿಮಾನದಲ್ಲಿನ ದೋಷವನ್ನು ರಾತ್ರಿಯೇ ಸರಿಪಡಿಸಲಾಗುವುದಿಲ್ಲ, ಪರ್ಯಾಯ ವ್ಯವಸ್ಥೆ ಮಾಡುವವರೆಗೆ ನಮ್ಮ ನಿಯೋಗವು ಭಾರತದಲ್ಲಿಯೇ ಇರುತ್ತದೆ ಎಂದು ಕೆನಡಾ ಪ್ರಧಾನ ಮಂತ್ರಿ ಕಚೇರಿಗೆ ಮಾಹಿತಿ ನೀಡಿದೆ.