Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಯುದ್ಧ ಶುರುವಾಗುತ್ತಿದ್ದಂತೆ ವಿದೇಶಗಳಿಂದ ತಾಯ್ನಾಡಿಗೆ ಮರಳುತ್ತಿರುವ ಇಸ್ರೇಲಿಗರು

ಯುದ್ಧ ಶುರುವಾಗುತ್ತಿದ್ದಂತೆ ಹಲವು ದೇಶದ ಜನರು ಸುರಕ್ಷಿತ ಸ್ಥಳಕ್ಕಾಗಿ ಬೇರೆ ಬೇರೆ ಕಡೆ ವಲಸೆ ಹೋಗುತ್ತಾರೆ. ತಾವು ಸುರಕ್ಷಿತವಾಗಿದ್ದರೆ ಸಾಕು ದೇಶ ಏನಾದರು ಆಗಲಿ ಎಂದು ಅಕ್ಕಪಕ್ಕದ ಪ್ರದೇಶಗಳಿಗೆ ಪಲಾಯನ ಮಾಡುತ್ತಾರೆ. ಆದರೆ, ಇಸ್ರೇಲಿಗರು ಮಾತ್ರ ಇಂತಹ ಭೀಕರ ಯುದ್ಧದ ಸಮಯದಲ್ಲಿ ಹೊರ ದೇಶಗಳಿಂದ ದೇಶ ಸೇವೆಗಾಗಿ ತಮ್ಮ ತಾಯ್ನಾಡಿಗೆ ಆಗಮಿಸುತ್ತಿದ್ದಾರೆ. ಹೌದು, ಇಸ್ರೇಲಿಗರ ದೇಶ ಪ್ರೇಮ ಹಾಗೂ ಸ್ವಾಭಿಮಾನಕ್ಕೆ ಯಾರು ಸಾಟಿಯಿಲ್ಲ. ಸುತ್ತಲೂ ಶತ್ರು ರಾಷ್ಟ್ರಗಳಿದ್ದರೂ ನಿರ್ಭಿತವಾಗಿ ಬದುಕುತ್ತಿರುವ ಇಸ್ರೇಲ್‌ನ ಈ ಸಧೃಡತೆಯ ಹಿಂದೆ ಇರುವುದು ಇಸ್ರೇಲಿಗರ ಅಪಾರ ದೇಶಭಕ್ತಿ. ಸದಾ ಯುದ್ಧ ಹಾಗೂ ರಾಜಕೀಯ ಆಸ್ಥಿರತೆಯ ಕಾರಣದಿಂದ ಸಿರಿಯಾದಂತಹ ದೇಶಗಳ ಬಹುತೇಕ ಜನರು ಯುದ್ಧಕಾಲದಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಆಶ್ರಯ ಅರಸಿ ಹೊರಟು ಹೋಗಿರುವುದು ಇದಕ್ಕೆ ಉದಾಹರಣೆ.

ಅಲ್ಲದೇ ಅಫ್ಘಾನಿಸ್ತಾನದಲ್ಲೂ ಅಫ್ಘಾನ್ ತಾಲಿಬಾನ್ ಸುಪರ್ದಿಗೆ ಸೇರುತ್ತಿದ್ದಂತೆ ಸಾವಿರಾರು ಜನ ಅಮೆರಿಕಾದಂತಹ ದೇಶಗಳಿಗೆ ವಲಸೆ ಹೋಗಿದ್ದರು. ಆದರೆ ಇಸ್ರೇಲಿಗರು ಇದಕ್ಕೆ ತದ್ವಿರುದ್ಧ, ತಮ್ಮ ತಾಯ್ನಾಡು ಸಂಕಷ್ಟದಲ್ಲಿದೆ. ಯುದ್ಧ ಪೀಡಿತವಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ವಿದೇಶಗಳಲ್ಲಿ ನೆಲೆಯಾಗಿದ್ದ ಅನೇಕರು ತಾಯ್ನಾಡಿಗೆ ಮರಳಿದ್ದಾರೆ. ತಮ್ಮದೆನ್ನುವ ನೆಲೆಯೊಂದು ಇಲ್ಲದೇ ಹೋದರೆ ಏನಾಗುತ್ತದೆ ಎಂಬುದು ಇಸ್ರೇಲಿಗರಿಗೆ ಬಹಳ ಚೆನ್ನಾಗಿ ಗೊತ್ತಿದೆ. ಹಲವು ದಶಕಗಳ ಕಾಲ ನೆಲೆ ಇಲ್ಲದೇ ಪ್ರಪಂಚದೆಲ್ಲೆಡೆ ತಿರಸ್ಕರಿಸಲ್ಪಟ್ಟು ಅಲೆದಾಡಿದ ನಂತರ ಶ್ರಮದಿಂದ ಕಟ್ಟಿದ ತಾಯ್ನಾಡನ್ನು ಅಷ್ಟು ಸುಲಭವಾಗಿ ಬಿಡಲು ಸಾಧ್ಯವೇ.?

ಇಸ್ರೇಲಿಗರ ಈ ಉನ್ನತವಾದ ಈ ದೇಶಭಕ್ತಿಯೇ ಅವರನ್ನು ಈ ಸಂಕಷ್ಟದ ಸಮಯದಲ್ಲೂ ಧೈರ್ಯದಿಂದ ಹೋರಾಡುವುದಕ್ಕೆ ಶಕ್ತಿ ನೀಡುತ್ತಿದೆ ಎಂದು ಇಡಿ ವಿಶ್ವವೇ ಹೊಗಳುತ್ತಿದೆ. ಜಗತ್ತಿನ ವಿವಿಧ ಮೂಲೆಗಳಲ್ಲಿ ಕೆಲಸ ಅರಸಿ ಹೋಗಿರುವ ಇಸ್ರೇಲಿಗರು , ಇಸ್ರೇಲ್‌ ಮೇಲೆ ಹಮಾಸ್‌ ದಾಳಿಯ ವಿಚಾರ ತಿಳಿಯುತ್ತಿದ್ದಂತೆ ತಾಯ್ನಾಡಿಗೆ ಮರಳಿದ್ದಾರೆ. ವಿದೇಶದಲ್ಲಿರುವ ಇಸ್ರೇಲಿಗರನ್ನು ಹೊತ್ತ ವಿಮಾನವೊಂದು ಇಸ್ರೇಲ್‌ನ ಟೆಲ್ ಅವಿವಾದ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ವಿಮಾನದಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟಿ ಖುಷಿಪಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.