Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಎರ್ನಾಕುಲಂ ಯಾಹೋವಾ ಸಮಾವೇಶದಲ್ಲಿ ಭೀಕರ ಸ್ಪೋಟ: ಒಂದು ಸಾವು , 23ಕ್ಕೂ ಹೆಚ್ಚು ಮಂದಿಗೆ ಗಾಯ

ಎರ್ನಾಕುಲಂ: ಎರ್ನಾಕುಲಂನ ಕಳಮಶೇರಿ ಯಲ್ಲಿರುವ ಕನ್ವೆನ್ಷನ್ ಸೆಂಟರ್‌ನಲ್ಲಿ ಕ್ರೈಸ್ತ ಪಂಗಡದವರ (ಯಾಹೋವಾ ಸಾಕ್ಷಿ) ಸಮಾವೇಶದಲ್ಲಿ ನಡೆದ ಭೀಕರ ಸ್ಫೋಟದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿ, 23 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಪ್ರಾರ್ಥನಾ ಸಭೆ ಇದಾಗಿದ್ದು, ಸಭಾಂಗಣದಲ್ಲಿ ಎಲ್ಲರೂ ಕಣ್ಣುಮುಚ್ಚಿ ಪ್ರಾರ್ಥನೆ ಮಾಡುತ್ತಿರುವಾಗ ಸಭಾಂಗಣದ ಮುಂಭಾಗದಲ್ಲಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಪ್ರಾರ್ಥನೆಯ ವೇಳೆ ಭಾರೀ ಸ್ಫೋಟದ ಸದ್ದು ಕೇಳಿ ಬೆಂಕಿ ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿ ಚದುರಿ ಓಡಿದ್ದಾರೆ.

ತೀವ್ರ ಸುಟ್ಟಗಾಯಗಳಾದ ಜನರನ್ನು ವಿವಿಧ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಆರೋಗ್ಯ ಸಚಿವರು ಎರ್ನಾಕುಲಂನಲ್ಲಿರುವ ಎಲ್ಲಾ ಆಸ್ಪತ್ರೆಗಳಿಗೆ ಸಿದ್ಧವಾಗಿರುವಂತೆ ಸೂಚನೆ ನೀಡಿದ್ದು, ರಜೆಯಲ್ಲಿರುವ ಎಲ್ಲಾ ವೈದ್ಯರು ಮತ್ತು ದಾದಿಯರು ಕೆಲಸಕ್ಕೆ ಮರಳಲು ಸೂಚಿಸಲಾಗಿದೆ. ಮೂರು ದಿನಗಳ ಕಾಲ ಕನ್ವೆನ್ಷನ್ ಸೆಂಟರ್‌ನಲ್ಲಿ ಸಭೆಗಳು ಮತ್ತು ಪ್ರಾರ್ಥನೆಗಳು ನಡೆಯುತ್ತಿವೆ. ಇಂದು ಕೊನೆಯ ದಿನವಾಗಿತ್ತು. ಬೆಳಗಿನ ಪ್ರಾರ್ಥನೆ ಮುಗಿದ ತಕ್ಷಣ ಸ್ಫೋಟ ಸಂಭವಿಸಿದೆ.ಒಂದು ಮಗು ಸೇರಿದಂತೆ ಏಳು ಮಂದಿಯನ್ನು ಐಸಿಯುಗೆ ದಾಖಲಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಒಂಬತ್ತು ಮಂದಿಯನ್ನು ಕಾಕ್ಕನಾಡಿನ ಸನ್‌ರೈಸ್ ಆಸ್ಪತ್ರೆಗೆ ರವಾನಿಸಲಾಗಿದೆ

ಸ್ಪೋಟಕ್ಕೆ ಕಾರಣ ತಿಳಿದುಬಂದಿಲ್ಲ.