Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಕ್ರಮವಾಗಿ ನೆಲೆಸಿರುವ ಆಫ್ಘನ್ ಪ್ರಜೆಗಳ ಗಡಿ ಪಾರು ಮಾಡಿದ ಪಾಕ್‌

ಇಸ್ಲಾಮಾಬಾದ್: ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳಿಗೆ ನೀಡಿದ್ದ ಗಡುವು ಮುಗಿಯುತ್ತಿದ್ದಂತೆಯೇ ಪಾಕಿಸ್ತಾನ ಸರ್ಕಾರವು ತನ್ನ ನೆಲದಲ್ಲಿ ಆಶ್ರಯ ಪಡೆದಿರುವ ಅಫಘಾನಿಸ್ತಾನದ ಲಕ್ಷಾಂತರ ಮಂದಿಯನ್ನು ಹೊರ ಹೋಗುವಂತೆ ಸೂಚಿಸಿದೆ.

ಪಾಕ್‌ನಲ್ಲಿ ಅಕ್ರಮವಾಗಿ ನೆಲೆಸಿರುವ 17 ಲಕ್ಷಕ್ಕೂ ಹೆಚ್ಚು ಅಫಘಾನಿಸ್ತಾನಿಯರು ನ. 1ರೊಳಗೆ ತಮ್ಮ ನೆಲೆಗಳನ್ನು ತೆರವು ಮಾಡಬೇಕು ಎಂದು ಪಾಕಿಸ್ತಾನ ಸರಕಾರವು ಆದೇಶಿಸಿತ್ತು.

ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಇದೀಗ ಲಕ್ಷಾಂತರ ಆಫ್ಘನ್ ಪ್ರಜೆಗಳು ತೊರ್ಕಾಮ್ ಮತ್ತು ಚಮನ್ ಪ್ರದೇಶಗಳಲ್ಲಿರುವ ಗಡಿ ದಾಟಿ ಪಾಕಿಸ್ತಾನವನ್ನು ತೊರೆದು ತವರಿಗೆ ಹಿಂತಿರುಗುತ್ತಿದ್ದಾರೆ.

ಹತ್ತಾರು ವರ್ಷ ಪಾಕಿಸ್ತಾನದಲ್ಲೇ ನೆಲಸಿದ್ದ ಆಫ್ಘನ್ ಪ್ರಜೆಗಳ ಸ್ಥಿತಿ ದಿಕ್ಕು ತೋಚಾದಂತಾಗಿದೆ . ಪಾಕಿಸ್ತಾನದ ಗಡಿ ದಾಟಿದ ತಕ್ಷಣ ಅವರಿಗೆ ಸಂಕಷ್ಟಗಳ ಸುರಿ ಮಳೆಯೇ ಎದುರಾಗಿದ್ದು, ಕುಟುಂಬದ ಸದಸ್ಯರು, ತಾವಿದ್ದ ಮನೆಯಲ್ಲಿನ ಅಗತ್ಯ ವಸ್ತುಗಳ ಸಮೇತ ಕತ್ತೆ-ಕುದುರೆ ಗಾಡಿಗಳಲ್ಲಿ ಹೊರಟು ಪಾಕ್‌-ಆಪ್ಘನ್‌ ಗಡಿಯಲ್ಲಿ ನಿಂತಿದ್ದಾರೆ.

ಬಂಧನ ಮತ್ತು ಗಡಿಪಾರು ತಪ್ಪಿಸಲು ಸ್ವದೇಶಕ್ಕೆ ಮರಳುತ್ತಿರುವ ಈ ನಾಗರಿಕರ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿದ್ದು, ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುವಂತಾಗಿದೆ. ತಾಲಿಬಾನಿಗಳು ಈ ನಾಗರಿಕರಿಗೆ ವಾಸಿಸಲು ಶಿಬಿರಗಳನ್ನು ಸ್ಥಾಪಿಸಿದ್ದಾರೆ. ಶೌಚಾಲಯ, ಆಹಾರ ಸೇರಿದಂತೆ ಮೂಲಸೌಕರ್ಯಗಳ ಸೌಲಭ್ಯಗಳಿಲ್ಲದೇ ಜನರು ಬಯಲಿನಲ್ಲೇ ಮಲಗಿ ಕಾಲಕಳೆಯಬೇಕಾಗಿ ಬಂದಿದ್ದು, ಇನ್ನೂ ಜೀವ ರಕ್ಷಣೆಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.