Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚಲಾಕಿ ಚೋರನಾದ ಕಂಪ್ಯೂಟರ್ ಸೈನ್ಸ್ ಪದವೀಧರ: 133 ಲ್ಯಾಪ್‌ಟಾಪ್‌, 19 ಮೊಬೈಲ್ ಸೇರಿ ಹಲವು ಸೊತ್ತು ವಶ

ಬೆಂಗಳೂರು: ಬೆಂಗಳೂರು ಐಟಿ ಉದ್ಯೋಗಿಗಳ ಪೇಯಿಂಗ್ ಗೆಸ್ಟ್ (ಪಿ.ಜಿ) ಕೊಠಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಕಂಪ್ಯೂಟರ್ ಸೈನ್ಸ್ ಪದವೀಧರ ಸೇರಿ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕಂಪ್ಯೂಟರ್ ಸೈನ್ಸ್ ಪದವೀಧರನಾಗಿದ್ದ ಪ್ರಮುಖ ಆರೋಪಿ ನಗರದ ಹಲವು ಪಿ.ಜಿಗಳಿಂದ 75 ಲಕ್ಷ ರೂಪಾಯಿ ಮೌಲ್ಯದ 133 ಲ್ಯಾಪ್‌ಟಾಪ್‌ಗಳು, 19 ಮೊಬೈಲ್ ಫೋನ್‌ಗಳು ಮತ್ತು ನಾಲ್ಕು ಟ್ಯಾಬ್ಲೆಟ್‌ಗಳನ್ನು ಕಳವು ಮಾಡಿದ್ದ.

ಈತನಿಂದ ಕದ್ದ ಎಲೆಕ್ಟ್ರಾನಿಕ್ ವಸ್ತುಗಳನ್ನು ಪಡೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಪ್ರಕಾರ, “ಈ ಹಿಂದೆ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯೂ ಪೇಯಿಂಗ್ ಗೆಸ್ಟ್‌ಗಳು ಮತ್ತು ಬ್ಯಾಚುಲರ್ ಗಳು ಇರುತ್ತಿದ್ದ ವಸತಿ ನಿಲಯಗಳಿಗೆ ಭೇಟಿ ನೀಡುತ್ತಿದ್ದ. ಅಲ್ಲಿಂದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಕದಿಯುತ್ತಿದ್ದ”.

“ಈ ಕಳ್ಳತನ ದಂಧೆಗೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೇಂದ್ರ ವಿಭಾಗದ ಸುಮಾರು ಎಂಟು ಪ್ರಕರಣಗಳು ಪತ್ತೆಯಾಗಿವೆ. ಇವರು ಅಪರಾಧ ಎಸಗಿರುವ ಇತರ ಪೊಲೀಸ್ ಠಾಣೆಗಳಲ್ಲೂ ಪ್ರಕರಣಗಳನ್ನು ನಾವು ಪರಿಶೀಲಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.