Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಾದ್ಯಮದ ಮುಂದೆ ಕ್ಷಮೆಯಾಚಿಸಿದ ನಿತೀಶ್ ಕುಮಾರ್; ಅಷ್ಟಕ್ಕೂ ಬಿಹಾರ ಸಿಎಂ ಅವರ ಹೇಳಿಕೆಯಲ್ಲೇನಿದೆ?

ಮಹಿಳೆಯರ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಕ್ಷಮೆಯಾಚಿಸಿದ್ದು, ತನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದಾರೆ.

ಮಂಗಳವಾರ ಮಧ್ಯಾಹ್ನ ರಾಜ್ಯ ವಿಧಾನಸಭೆಯಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳಾ ಶಿಕ್ಷಣದ ಪಾತ್ರದ ಕುರಿತು ಮಾತನಾಡುವಾಗ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ಷಮೆಯಾಚಿಸಿದ್ದಾರೆ.

ನಾನು ಕ್ಷಮೆಯಾಚಿಸುತ್ತೇನೆ ಮತ್ತು ನನ್ನ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ. ನನ್ನ ಮಾತುಗಳು ತಪ್ಪಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ,ಯಾರಿಗಾದರೂ ನೋವಾಗಿದ್ದರೆ,ನಾನು ಆ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

ನನ್ನ ಮಾತುಗಳು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿಲ್ಲ. ಜನಸಂಖ್ಯೆ ನಿಯಂತ್ರಣಕ್ಕೆ ಶಿಕ್ಷಣದ ಅಗತ್ಯ ಎಂದು ನಾನು ತಿಳಿದಿದ್ದೇನೆ. ಮಹಿಳಾ ಸಬಲೀಕರಣ ಮತ್ತು ಮಹಿಳಾ ಅಭಿವೃದ್ಧಿಯ ಪರವಾಗಿಯೂ ನಾನು ದೃಢವಾಗಿ ನಿಂತಿದ್ದೇನೆ ಎಂದು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಅವರು ಮಹಿಳೆಯರ ಬಗ್ಗೆ ನೀಡಿದ್ದ ಹೇಳಿಕೆ ವಿವಾದವಾಗಿತ್ತು. ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದ್ದವು.

ಬಿಹಾರದ ಸಂತಾನೋತ್ಪತ್ತಿ ದರವು 4.2 ರಿಂದ 2.9 ಕ್ಕೆ ಏಕೆ ಕುಸಿದಿದೆ ಎಂಬುದನ್ನು ವಿವರಿಸುವಾಗ ವಿವಾದಾತ್ಮಕ ಟೀಕೆಗಳನ್ನು ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಸಿಎಂ ಮಾತುಗಳನ್ನು ಬಿಜೆಪಿಯು ನಾಚಿಕೆಗೇಡು, ಅಸಹ್ಯ ಮತ್ತು ಅಶ್ಲೀಲ ಎಂದು ಟೀಕಿಸಿತು ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ನಿತೀಶ್ ಕುಮಾರ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು. ಹೇಳಿಕೆ ವಿರೋಧಿಸಿ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆದಿತ್ತು.

ನಿತೀಶ್ ಕುಮಾರ್ ಹೇಳಿಕೆಯಲ್ಲೇನಿದೆ?

ಮಹಿಳೆಯರು ಶಿಕ್ಷಣ ಹೊಂದಿರುವುದು ಜನಸಂಖ್ಯೆ ನಿಯಂತ್ರಣದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಒಬ್ಬ ಸುಶಿಕ್ಷಿತ ಮಹಿಳೆಯು ಗಂಡ ಲೈಂಗಿಕ ಕ್ರಿಯೆಯಲ್ಲಿ ತೊಡಗದಂತೆ ನಿರ್ಬಂಧ ಹೇರಬಲ್ಲವಳಾಗಿರುತ್ತಾಳೆ. ಜನನ ಪ್ರಮಾಣ ಹೆಚ್ಚಳಕ್ಕೆ ಪತಿಯ ಕೃತ್ಯವೇ ಕಾರಣವಾಗುತ್ತದೆ. ಜನನ ಪ್ರಮಾಣದಲ್ಲಿ ಇಳಿಕೆಯಾಗಿರುವುದಕ್ಕೆ ಮಹಿಳೆಯರು ಶಿಕ್ಷಣ ಪಡೆದಿರುವುದು ಕಾರಣ ಎಂದು ಅವರು ಹೇಳಿದ್ದರು.