Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸುರಂಗದೊಳಗೆ 96 ಗಂಟೆಗಳ ಕಾಲ ಬಂಧಿಯಾದ 40 ಕಾರ್ಮಿಕರು – ಕಾರ್ಯಾಚರಣೆ ಮುಂದುವರಿಕೆ

ಉತ್ತರಾಖಂಡ: ಕುಸಿದಿರುವ ಸುರಂಗದಲ್ಲಿ ಸಿಕ್ಕಿಬಿದ್ದಿರುವ 40 ಕಾರ್ಮಿಕರನ್ನು ರಕ್ಷಿಸುವ ಕಾರ್ಯ ವಿಳಂಬವಾಗುತ್ತಿದ್ದು, ಕಾರ್ಮಿಕರು ಪ್ರತಿ ಗಂಟೆಗೂ ಹೆಚ್ಚಿನ ಅಪಾಯದತ್ತ ಜಾರುತ್ತಿದ್ದಾರೆ. ಕಳೆದ 96 ಗಂಟೆಗಳಿಂದ ಕಾರ್ಮಿಕರು ಸುರಂಗದಲ್ಲಿ ಸಿಕ್ಕಿಬಿದ್ದಿದ್ದಾರೆ.

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ 4.5 ಕಿಮೀ ರಸ್ತೆಯ ಸುರಂಗದೊಳಗೆ 260 ಮೀಟರ್‌ ಗಳಷ್ಟು ಒಳಗೆ 40 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಬುಧವರಾ ಸಂಜೆಯವರೆಗೂ ಸುರಂಗವನ್ನು ಅಡ್ಡಗಟ್ಟಿರುವ 50 ಮೀಟರ್‌ ನಷ್ಟು ದೊಡ್ಡ ಬಂಡೆಯನ್ನು ತೆರವುಗೊಳಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ 96 ಗಂಟೆಗಳಿಂದ ಪ್ರಯತ್ನ ನಡೆಯುತ್ತಿದ್ದು, ಕಾರ್ಮಿಕರ ಕುಟುಂಬಗಳು ಮತ್ತು ಸಹೋದ್ಯೋಗಿಗಳ ಹತಾಶೆಗೆ ಕಾರಣವಾಗಿದೆ.

ಭೂಕುಸಿತಕ್ಕೆ ಒಳಗಾಗುವ ಪರ್ವತ ಶ್ರೇಣಿಯಲ್ಲಿ ಕೆಲಸ ಮಾಡುವುದರ ಕುರಿತು ಸರಿಯಾದ ಭೌಗೋಳಿಕ ಮಾಹಿತಿಯ ಕೊರತೆಯಿಂದಾಗಿ ಈ ಪ್ರಯತ್ನಗಳು ವಿಫಲವಾಗಿವೆ ಎಂದು ತಜ್ಞರು ಹೇಳಿದ್ದಾರೆ.

ಎನ್‌ ಡಿಆರ್‌ ಎಫ್ ಮತ್ತು ಉತ್ತರಾಖಂಡ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಆಗರ್ ಯಂತ್ರವನ್ನು ಬಳಸಿ ಸುರಕ್ಷಿತ ಕಿಂಡಿಮಾರ್ಗ ರಚಿಸಲು ನಿರ್ಧರಿಸಿದರು. ಇದೀಗ ಕಾರ್ಮಿಕರನ್ನು ಹೊರಗೆ ತರಲು 800 ಮತ್ತು 900 ಎಂಎಂ ವ್ಯಾಸದ ದೊಡ್ಡ ಪೈಪ್‌ ಗಳನ್ನು ಅಳವಡಿಸುತ್ತಿದ್ದಾರೆ.

ಕಾರ್ಮಿಕರ ರಕ್ಷಣೆಗಾಗಿ ಥಾಯ್ಲೆಂಡ್ ಮತ್ತು ನಾರ್ವೆಯ ತಜ್ಞರ ತಂಡಗಳ ಸಹಾಯವನ್ನೂ ತೆಗೆದುಕೊಳ್ಳಲಾಗುತ್ತಿದೆ. 50 ಮೀಟರ್‌ಗಿಂತಲೂ ಹೆಚ್ಚು ಉದ್ದದ ತ್ಯಾಜ್ಯದ ನಡುವೆ 800 ಎಂಎಂ ವ್ಯಾಸದ ಪೈಪ್‌ಗಳನ್ನು ಹಾಕಲಾಗುತ್ತಿದೆ. ಅವಶೇಷಗಳಿಗೆ ಅಡ್ಡಲಾಗಿ ಉಕ್ಕಿನ ಪೈಪ್‌ಗಳನ್ನು ಹಾಕಿ ಕಾರ್ಮಿಕರನ್ನು ಒಬ್ಬೊಬ್ಬರಾಗಿ ಹೊರತರುವ ಪ್ರಯತ್ನ ನಡೆಯುತ್ತಿದೆ.