Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಗ್ಯಾರಂಟಿ ಯೋಜನೆಗಳ ಸಮೀಕ್ಷೆಗೆ ಪಕ್ಷದ ಸಂಸ್ಥಾಪನ ದಿನದಂದು ಚಾಲನೆ’ – ಡಿಕೆಶಿ

ಬೆಂಗಳೂರು: ವಿರೋಧ ಪಕ್ಷಗಳ ಆರೋಪಗಳ ಬೆನ್ನಲ್ಲೇ ಕಾಂಗ್ರಸ್ ಪಕ್ಷವು ಬಿಡುಗಡೆಗೊಳಿಸಿದ 5 ಗ್ಯಾರಂಟಿಗಳ ಸಮೀಕ್ಷೆ ನಡೆಸಲು ಮುಂದಾಗಿದ್ದು, ಪಕ್ಷದ ಸಂಸ್ಥಾಪನ ದಿನವೇ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿಗಳೂ ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈಗಾಗಲೇ ನಾವು ನಮ್ಮ ಸರಕಾರದಿಂದ ಹಲವು ಗ್ಯಾರಂಟಿಗಳ ಬಿಡುಗಡೆಗೊಳಿಸಿದ್ದೇವೆ. ಆದರೆ ಗೃಹಜ್ಯೋತಿ, ಗೃಹಲಕ್ಷ್ಮಿ ಸಹಿತ ನಾಲ್ಕು ಗ್ಯಾರಂಟಿಗಳ ಪ್ರಯೋಜನ ಇನ್ನು ಬಹುತೇಕ ಜನರಿಗೆ ದೊರೆತಿಲ್ಲ. ಸರಕಾರ ನಂಬಿಸಿ ಮೋಸ ಮಾಡುತ್ತಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರಕಾರವು ಅಧಿಕಾರಿಗಳಿಂದ ಸಮೀಕ್ಷೆ ನಡೆಸಲು ತೀರ್ಮಾನಿಸುವುದರ ಜೊತೆಗೆ ಪಕ್ಷದ ವತಿಯಿಂದಲೂ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಇನ್ನು ಇದೇ ನ. 28 ಕಾಂಗ್ರೆಸ್‌ ಸಂಸ್ಥಾಪನ ದಿನಾಚರಣೆ ನಡೆಯಲಿದ್ದು, ಅಂದೇ ಮೊದಲ ಹಂತದ ಸಮೀಕ್ಷೆ ಆರಂಭಗೊಳ್ಳಲಿದೆ. ಅದಕ್ಕೆ ಮೊದಲು ಸಮಿತಿ ರಚಿಸಿ ಅದರಲ್ಲಿ ಬ್ಲಾಕ್‌, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧ್ಯಕ್ಷರು, ಕಾರ್ಯಕರ್ತರು, ನಾಯಕರನ್ನು ಆಯ್ಕೆ ಮಾಡಿ ಸಮೀಕ್ಷೆ ನಡೆಸಲಿದೆ. ಈ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರತೀ ಮನೆಗೆ ಭೇಟಿ ನೀಡಿ, ಎಷ್ಟು ಯೋಜನೆಗಳು ತಲುಪಿವೆ? ತಲುಪಿಲ್ಲ ಎಂದಾದರೆ ಅದಕ್ಕೆ ಅಡತಡೆಗಳು ಏನು? ಪರಿಹಾರದ ಕ್ರಮಗಳು, ಸುಧಾರಣೆಗಳ ಆವಶ್ಯಕತೆ ಇದೆಯೇ ಎಂಬ ಸಲಹೆ ಅಥವಾ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.