Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ಜಡ್ಜ್‌ ಫಾತಿಮಾ ಬೀವಿ ನಿಧನ

ನವದೆಹಲಿ:  ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ಫಾತೀಮಾ ಬೀವಿ(96) ಗುರುವಾರ ವಿಧಿವಶರಾಗಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾಜಿ ಸದಸ್ಯೆಯೂ ಆಗಿದ್ದ ಫಾತಿಮಾ ಬೀವಿ, ಅವರು 1997-2001ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿದ್ದರು. ದೇಶದ ಉನ್ನತ ನ್ಯಾಯಾಂಗಕ್ಕೆ ನೇಮಕಗೊಂಡ ಮೊದಲ ಮುಸ್ಲಿಂ ಮಹಿಳೆಯೂ ಆಗಿದ್ದರು.

1927 ರಲ್ಲಿ ಕೇರಳದಲ್ಲಿ ಜನಿಸಿದ್ದ ಫಾತೀಮಾ ಬೀವಿಗೆ ಅವರ ತಂದೆ ಕಾನೂನು ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹ ನೀಡಿದ್ದರು. 1950ರಲ್ಲಿ, ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಇವರು, ಬಾರ್ ಕೌನ್ಸಿಲ್ ಚಿನ್ನದ ಪದಕವನ್ನು ಪಡೆದ ಮೊದಲ ಮಹಿಳೆ ಎನಿಸಿಕೊಂಡಿದ್ದರು.

ಕೇರಳದಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಫಾತೀಮಾ ಬೀವಿ, 1974ರಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದರು. 1980ರಲ್ಲಿ ಅವರು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಸೇವೆ ಸಲ್ಲಿಸಿ 1983ರಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

1989ರಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ಮೊದಲ ಮಹಿಳಾ ಜಡ್ಜ್‌ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ, ಅವರು ಉನ್ನತ ನ್ಯಾಯಾಂಗದಲ್ಲಿ ಮೊದಲ ಮುಸ್ಲಿಂ ಮಹಿಳೆ ಮತ್ತು ಏಷ್ಯಾದ ದೇಶದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾದ ಮೊದಲ ಮಹಿಳೆ ಎನಿಸಿಕೊಂಡಿದ್ದರು.

1993ರಲ್ಲಿ ನಿವೃತ್ತರಾದ ನಂತರ, ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಮತ್ತು ನಂತರ ತಮಿಳುನಾಡಿನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಾಲ್ವರು ಖೈದಿಗಳು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ನಂತರ ಅವರು ತಮಿಳುನಾಡು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದರು.