Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹಸುಗೂಸುಗಳ ಮಾರಾಟ ದಂಧೆ – ಬೃಹತ್ ಜಾಲ ಭೇದಿಸಿದ ಸಿಸಿಬಿ, 8 ಮಂದಿ ಅರೆಸ್ಟ್!

ಬೆಂಗಳೂರು: ನಗರದಲ್ಲಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಹಸುಗೂಸುಗಳ ಮಾರಾಟ ದಂಧೆಯನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಪುಟ್ಟ ಕಂದಮ್ಮಗಳನ್ನು ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈವರೆಗೆ ಸುಮಾರು 60ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರೋದಾಗಿ ವಿಚಾರಣೆ ವೇಳೆ ದಂಧೆಕೋರರು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಕಳೆದ ಎಂಟತ್ತು ವರ್ಷಗಳಿಂದ ಮಕ್ಕಳ ಮಾರಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ದಂಧೆ ವಿಸ್ತರಿಸಿದೆ ಎನ್ನಲಾಗಿದೆ. ಆರೋಪಿ ಏಜೆಂಟ್‌ಗಳು ನೀಡಿದ ಮಾಹಿತಿ ಮೇರೆಗೆ ಈವರೆಗೆ ಮಾರಾಟವಾಗಿರೋ 10 ಮಕ್ಕಳ ವಿಳಾಸವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ವಿಎಫ್, ಸೆರೊಗೆಸಿ ಮೂಲಕ ತಾಯಂದಿರಿಂದ ಮಕ್ಕಳನ್ನ ಪಡೆದು ಮಾರಾಟ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಕೇವಲ 10, 20 ದಿನದ ಎಳೆ ಕಂದಮ್ಮಗಳನ್ನ ಈ ಗ್ಯಾಂಗ್ ಮಾರಾಟ ಮಾಡುತ್ತಿತ್ತು. ಅಲ್ಲದೇ 1 ಮಗುವಿಗೆ 3 ಲಕ್ಷ ಹಣ ಕೊಡುವುದಾಗಿ ತಾಯಂದಿರಿಗೆ ಆಸೆ ತೋರಿಸಿಸುತ್ತಿದ್ದರು. ಅವುಗಳನ್ನು ಖರೀದಿಸಿ ಮಕ್ಕಳಿಲ್ಲದ ದಂಪತಿಗಳಿಗೆ 8 ಲಕ್ಷಕ್ಕೆ ಮಾರಾಟ ಮಾಡಿ, ಮಧ್ಯವರ್ತಿಗಳು ತಾವು 5 ಲಕ್ಷ ಹಣವನ್ನ ಲಪಟಾಯಿಸುತ್ತಿದ್ದರು. ಗರ್ಭಿಣಿಯಾಗಿದ್ದು, ಮನೆಯಲ್ಲಿ ಆರ್ಥಿಕ ಸಂಕಷ್ಟ ಇರುವ ಮಹಿಳೆಯರು, 2-3 ಮಕ್ಕಳಿದ್ದು, ಮತ್ತೆ ಗರ್ಭಿಣಿಯಾಗಿ ಕಷ್ಟದಲ್ಲಿರುವ ಮಹಿಳೆಯರು, ಕೂಲಿ ಮಾಡುವ ಮಹಿಳೆಯರನ್ನೇ ಹೆಚ್ಚಾಗಿ ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬಾರ್ಷನ್‌ಗೆ ಬರುವ ಸ್ತ್ರೀಯರನ್ನ ಪತ್ತೆ ಹಚ್ಚಿ ಮಗು ಕೊಟ್ಟರೆ ಹಣ ಕೊಡುವ ಆಮಿಷ ಒಡ್ಡುತ್ತಿದ್ದರು. ಈ ವೇಳೆ ಕೆಲವು ಐವಿಎಫ್ ಕೇಂದ್ರಗಳು, ರಕ್ತ ಪರೀಕ್ಷೆ ಕೇಂದ್ರಗಳ ಜೊತೆ ಆರೋಪಿಗಳ ಶಾಮೀಲಾಗಿರುವ ಶಂಕೆಯೂ ವ್ಯಕ್ತವಾಗಿದೆ. ಇನ್ನೂ ಮಕ್ಕಳ ಮಾರಾಟ ಜಾಲವನ್ನ ಪತ್ತೆ ಹಚ್ಚಲು ಸಿಸಿಬಿ ಅಧಿಕಾರಿಗಳ ತಂಡ 1 ತಿಂಗಳು ಮಾರುವೇಷದಲ್ಲಿ ಕಾರ್ಯಚರಣೆ ನಡೆಸಿತ್ತು. ಮಗುವನ್ನು ಕೊಳ್ಳುವವರಂತೆ ರಾಜರಾಜೇಶ್ವರಿ ನಗರದಲ್ಲಿ ಮಗು ಮಾರಾಟ ಜಾಲಕ್ಕೆ ಖೆಡ್ಡಾ ತೋಡಿದ್ದರು. ಮಾರಾಟ ಜಾಲದಲ್ಲಿ ಮಹಾಲಕ್ಷ್ಮಿ ಎಂಬಾಕೆಯೇ ಕರ್ನಾಟಕದ ಕಿಂಗ್‌ಪಿನ್ ಆಗಿದ್ದು, ರಾಜ್ಯದಲ್ಲಿ ಹಲವರಿಗೆ ಮಗು ಮಾರಾಟ ಮಾಡುತ್ತಿದ್ದಳು ಅನ್ನೋದು ತಿಳಿದುಬಂದಿದೆ.

ಸಿಸಿಬಿ ಪೊಲೀಸರು ಮಹಾಲಕ್ಷ್ಮಿ ಸೇರಿ ತಮಿಳುನಾಡಿನ ಈರೋಡ್ ಮೂಲದ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಹೇಮಲತಾ, ಶರಣ್ಯಳನ್ನ ಮಗು ಮಾರಾಟ ಮಾಡುತ್ತಿದ್ದಾಗಲೇ ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ತೀವ್ರ ವಿಚಾರಣೆ ಬಳಿಕ ದಂಧೆಯಲ್ಲಿ ತೊಡಗಿದ್ದ ಗೋಮತಿ, ರಾಧಾಮಣಿ ಹಾಗೂ ಸುಹಾಸಿಣಿಯನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.