Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಂಚನೆ ಪ್ರಕರಣ: ಆರೋಪಿ ಚೈತ್ರಾ ಕುಂದಾಪುರ, ಶ್ರೀಕಾಂತ್‌ಗೆ ಜಾಮೀನು

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ಬೈಂದೂರಿನ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ನೀಡುವುದಾಗಿ ಹೇಳಿ 5 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ ಪ್ರಕರಣದಲ್ಲಿ ಜೈಲಿನಲ್ಲಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರಳಿಗೆ ಜಾಮೀನು ದೊರಕಿದೆ. ಟಿಕೆಟ್ ನೀಡುವುದಾಗಿ ವಂಚಿಸಿದ್ದಾರೆ ಎಂದು ಉದ್ಯಮಿ ಗೋವಿಂದಬಾಬು ಪೂಜಾರಿ ಸೆಪ್ಟೆಂಬರ್ 8ರಂದು ಬಂಡೇಪಾಳ್ಯ ಠಾಣೆಯಲ್ಲಿ ಚೈತ್ರಾ ಮತ್ತು ಇತರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಆಗಿತ್ತು. ಬಳಿಕ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಚೈತ್ರಾ, ಗಗನ್ ಕಡೂರು, ಹೊಸಪೇಟೆಯ ಸ್ವಾಮೀಜಿ ಹಾಲಶ್ರೀ ಸ್ವಾಮೀಜಿ, ಚನ್ನನಾಯ್ಕ, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಸೇರಿ 9 ಮಂದಿಯನ್ನು ಬಂಧಿಸಲಾಗಿತ್ತು. ಜೈಲು ಸೇರಿದ ಎರಡೂವರೆ ತಿಂಗಳ ಬಳಿಕ ಚೈತ್ರಾ ಕುಂದಾಪುರ ಹಾಗೂ ಆಕೆಯ ಸಹಚರ ಶ್ರೀಕಾಂತ್ ಅವರಿಗೆ ಜಾಮೀನು ಸಿಕ್ಕಿದೆ.

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚನೆ‌ ಮಾಡಿದ ಪ್ರಕರಣದ ಆರೋಪಿಗಳಾದ ಚೈತ್ರಾ, ಶ್ರೀಕಾಂತ್ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಬೆಂಗಳೂರಿನ 3ನೇ ಎಸಿಎಂಎಂ ಕೋರ್ಟ್ನಲ್ಲಿ ಚೈತ್ರಾ ಪರ ವಕೀಲ ಹರ್ಷ ಮುತಾಲಿಕ್ ಅವರು ವಾದ ಮಂಡಿಸಿದ್ದರು. ಇದನ್ನು ಆಲಿಸಿದ ನ್ಯಾಯಾಲಯವು ಚೈತ್ರಾ ಹಾಗೂ ಶ್ರೀಕಾಂತ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ, ಬೆಂಗಳೂರು ಬಿಟ್ಟು ತೆರಳಬಾರದು ಎಂದು ಆದೇಶವನ್ನು ಹೊರಡಿಸಲಾಗಿದೆ. ಜೊತೆಗೆ, ಸಾಕ್ಷಿಗಳ ನಾಶಕ್ಕೆ ಅಥವಾ ಆರೋಪಿಗಳ ವಿರುದ್ಧ ಇರುವ ಸಾಕ್ಷಿದಾರರ ಮೇಲೆ ಪ್ರಭಾವ ಬೀರದಂತೆ ಷರತ್ತು ಹಾಕಲಾಗಿದೆ.